ಬಾಡಿಗೆ ತಾಯಂದಿರ ಗರ್ಭಪಾತ ಪ್ರಕರಣ; ಕೇಸ್ ದಾಖಲಿಸಲು ಪೊಲೀಸರಿಗೆ ಮಹಿಳಾ ಆಯೋಗ ತಾಕೀತು

ಬೆಂಗಳೂರು: ಬೇಗೂರು ಬಳಿ ಬಾಡಿಗೆ ತಾಯಂದಿರ ಮೇಲಿನ ದೌರ್ಜನ್ಯ ಪ್ರಕರಣಕ್ಕೆ ಹಠಾತ್ ತಿರುವು ಸಿಕ್ಕಿದೆ. ಬಾಡಿಗೆ ತಾಯಂದಿರ ಮೇಲೆ ಹಲ್ಲೆ ಮಾಡಿ, ಬಲವಂತವಾಗಿ ಗರ್ಭಪಾತ ಮಾಡಿರುವ ಪ್ರಕರಣ ಕುರಿತಂತೆ ರಾಜ್ಯ ಮಹಿಳಾ ಆಯೋಗ ಸ್ವಯಂಪ್ರೇರಿತ ದೂರು ದಾಖಲಿಸಿ ತನಿಖೆ ಕೈಗೊಂಡಿದೆ. ಅಷ್ಟೇ ಅಲ್ಲ ಗರ್ಭಿಣಿ ಮೇಲೆ ದೌರ್ಜನ್ಯ ನಡೆಸಿರುವವರನ್ನು ಕೂಡಲೇ ಬಂಧಿಸಬೇಕೆಂದು ಮಹಿಳಾ ಆಯೋಗದ ಅಧ್ಯಕ್ಷೆ ಆಗ್ನೇಯ ವಿಭಾಗದ ಪೊಲೀಸರಿಗೆ ತಾಕೀತು ಮಾಡಿದ್ದಾರೆ.

ಬೆಂಗಳೂರಿನ ಬೇಗೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿನ ಫರ್ಟಿಲಿಟಿ ಸೆಂಟರಿನಲ್ಲಿ ಬಾಡಿಗೆ ತಾಯ್ತನ ಹೊಂದುವ ಗರ್ಭಿಣಿಯಾರಿಗೆ ಸ್ಥಳೀಯ ಪಿಜಿ ಸೆಂಟರೊಂದು ಆಸರೆಯಾಗಿ ನಿಂತಿದೆ. ಆ ಪಿಜಿಗೆ ಭೇಟಿ ನೀಡಿದ ಬೊಮ್ಮನಹಳ್ಳಿಯ ಸ್ವಾತಿ ಮಹಿಳಾ ಸಂಘಟನೆಯ ಸದಸ್ಯರೆಂದು ಹೇಳಿಕೊಂಡ ಪೂಜಾ, ಪ್ರೇಮ, ಆಶಾ, ರೀಟಾ, ಪ್ರಮೀಳ ಹಾಗೂ ಮಂಜುನಾಥ್ ಎಂಬವರು ಹಣಕ್ಕಾಗಿ ಗರ್ಭಿಣಿಯರ ಮೇಲೆ ಹಲ್ಲೆ ನಡೆಸಿದ್ದಾರೆಂಬುದು ಆರೋಪ.
ಬಾಡಿಗೆ ತಾಯ್ತನಕ್ಕೆ ಪಡೆಯುತ್ತಿರುವ ಹಣದಲ್ಲಿ ತಮಗೂ ಪಾಲು ನೀಡಬೇಕೆಂದು ಈ ಮಹಿಳೆಯರ ತಂಡ ಒತ್ತಾಯಿಸಿದ್ದು, ಹಣ ನೀಡದಿದ್ದರೆ ಪಿಜಿಯಲ್ಲಿನ ಗರ್ಭಿಣಿಯರಿಗೆ ಥಳಿಸಿ ಗರ್ಭಪಾತ ಮಾಡುವುದಾಗಿ ಬೆದರಿಸಿದ್ದಾರೆನ್ನಲಾಗಿದೆ.

ಮಾರ್ಚ್ 11ರಂದು ಪಿಜಿ ಕೇಂದ್ರಕ್ಕೆ ನುಗ್ಗಿ ದಾಂದಲೆ ನಡೆಸಿರುವ ಗುಂಪು, 4 ತಿಂಗಳ ಗರ್ಭಿಣಿ ಮೇಲೆ ಹಲ್ಲೆ ಮಾಡಿದೆ. ಹಲ್ಲೆಗೊಳಗಾದ ಮಹಿಳೆಗೆ ಗರ್ಭಪಾತವಾಗಿದ್ದು, ಆಸ್ಪತ್ರೆಗೆ ದಾಖಲಾಗಿದ್ದಾರೆ.

ಮಹಿಳಾ ಆಯೋಗ ಗರಂ 

ಘಟನೆ ಬಗ್ಗೆ ಮಾಹಿತಿ ಪಡೆದ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಪ್ರಮೀಳಾ ನಾಯ್ಡು ಅವರು ಅಧಿಕಾರಿಗಳೊಂದಿಗೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಪಿಜಿ ಮುಖ್ಯಸ್ಥರ ಹಾಗೂ ಸಂತ್ರಸ್ತೆಯ ಹೇಳಿಕೆಗಳನ್ನು ದಾಖಲಿಸಿಕೊಂಡ ಆಯೋಗದ ಅಧ್ಯಕ್ಷೆ ಪ್ರಮೀಳಾ ನಾಯ್ಡು, ಘಟನೆ ಬಗ್ಗೆ ಎಫ್.ಐ.ಆರ್. ದಾಖಲಿಸಿ ತಪ್ಪಿಸ್ಥರನ್ನು ಬಂಧಿಸಬೇಕೆಂದು ಆಗ್ನೇಯ ವಿಭಾಗದ ಡಿಸಿಪಿ, ಸ್ಥಳೀಯ ಎಸಿಪಿ ಹಾಗೂ ಬೇಗೂರು ಠಾಣೆಯ ಪೊಲೀಸರಿಗೆ ಅವರು ನಿರ್ದೇಶನ ನೀಡಿದರು. ಎಫ್.ಐ.ಆರ್. ಪ್ರತಿಯನ್ನು ಹಾಗೂ ಘಟನಾ ಸ್ಥಳದಲ್ಲಿನ ಸಿಸಿಟಿವಿ ದೃಶ್ಯಗಳನ್ನು ಸಂಗ್ರಹಿಸಿ ಮಹಿಳಾ ಆಯೋಗಕ್ಕೆ ನೀಡಬೇಕೆಂದೂ ಸೂಚನೆ ನೀಡಿದರು.

Related posts