ಸೆಲ್ಪೀ ವಿಡಿಯೋ ಮಾಡಿ ಪೇಚಿಗೆ ಸಿಲುಕಿದ ನಟಿ ಸಂಜನಾ

ಬೆಂಗಳೂರು : ಸಂಚಾರಿ ನಿಯಮ ಉಲ್ಲಂಘನೆ ಹಿನ್ನೆಲೆಯಲ್ಲಿ ನಟಿ ಸಂಜನಾ ದಂಡ ಕಟ್ಟಿದ್ದಾರೆ. ಮೆಜೆಸ್ಟಿಕ್ ರಸ್ತೆಯಲ್ಲಿ ಕಾರು ಚಾಲನೆ ಮಾಡುವಾಗ ಅದನ್ನು ಸೆಲ್ಪೀ ವಿಡಿಯೋ ಮಾಡಿ ಪೇಚಿಗೆ ಸಿಲುಕಿದ್ದ ನಟಿ ಸಂಜನಾ ಗಲ್ರಾನಿ ವಿವಾದಕ್ಕೆ ಗುರಿಯಾಗಿದ್ದರು.
ಸಂಚಾರ ನಿಯಮ ಉಲ್ಲಂಘನೆ ಕಾರಣಕ್ಕಾಗಿ ಪೊಲೀಸರಿಂದ ನೋಟಿಸ್ ಪಡೆದಿದ್ದ ನಟಿ ಸಂಜನಾ ಗಲ್ರಾನಿ ಕ್ವೀನ್ಸ್ ರಸ್ತೆಯಲ್ಲಿರುವ ಮುಖ್ಯ ಕಚೇರಿಗೆ ಹಾಜರಾಗಿ 2000 ರೂಪಾಯಿ ದಂಡ ಕಟ್ಟಿದ್ದಾರೆ.
ಜಂಟಿ ಪೊಲೀಸ್ ಆಯುಕ್ತ ಡಾ. ರವಿಕಾಂತೇಗೌಡರ ಮುಂದೆ ನಟಿ ಸಂಜನಾ ದಂಡ ಪಾವತಿಸಿ ಕ್ಷಮೆಯಾಸಿದ್ದಾರೆ.
ತೆಲುಗು ನಟ ಮಹೇಶ್ ಬಾಬು ಅವರ ಸರಿಲೇರು ನೀಕೆವ್ವರು ಚಿತ್ರದ ವೀಕ್ಷಣೆಗೆ ನಟಿ ಸಂಜನಾ ಗಲ್ರಾನಿ ತೆರಳಿದ್ದರು. ಈ ವೇಳೆ ಕಾರ್ ಡ್ರೈವ್ ಮಾಡುವಾಗ ಸೆಲ್ಫಿ ವಿಡಿಯೋ ಸಹ ಮಾಡಿ, ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದರು. ಸಾಕಷ್ಟು ವೈರಲ್ ಆಗಿದ್ದ ಈ ವಿಡಿಯೋ ಪೊಲೀಸರ ಆಕ್ರೋಶಕ್ಕೂ ಕಾರಣವಾಗಿತ್ತು.
ಪ್ರಕರಣಕ್ಕೆ ಸಂಬಂಧಿಸಿದಂತೆ ಸಂಚಾರಿ ನಿಯಮ ಉಲ್ಲಂಘನೆ ಆರೋಪದಡಿ ಸಂಜನಾಗೆ ಬನಶಂಕರಿ ಸಂಚಾರಿ ಠಾಣೆ ಪೊಲೀಸರು ನೋಟಿಸ್ ನೀಡಿದ್ದರು. ತನ್ನ ತಪ್ಪನ್ನು ಒಪ್ಪಿಕೊಂಡ ನಟಿ ಸಂಜನಾ ದಂಡದ ಹಣವನ್ನು ಪಾವತಿಸಿದ್ದಲ್ಲದೆ, ಪೊಲೀಸ್ ಅಧಿಕಾರಿಗಳ ಮುಂದೆ ಕ್ಷಮೆ ಯಾಚಿಸಿದ್ದಾರೆ.

Related posts