ಪರಿಷತ್ ಚುನಾವಣೆ ; ಸವದಿಗೆ ಅಡ್ಡ ಮತದಾನದ ಆತಂಕ

ಬೆಂಗಳೂರು: ಉಪಮುಖ್ಯಮಂತ್ರಿ ಲಕ್ಷ್ಮಣ್ ಸವದಿ ವಿಧಾನ ಪರಿಷತ್ ಉಪ ಚುನಾನಾವಣೆಗೆ ನಾಮಪತ್ರ ಸಲ್ಲಿಸಿದ್ದಾರೆ. ಅವರ ಪ್ರತಿಸ್ಪರ್ದಿಯಾಗಿ ಕಾಂಗ್ರೆಸ್-ಜೆಡಿಎಸ್ ಮೈತ್ರಿಕೂಟ ಅಭ್ಯರ್ಥಿ ಅನಿಲ್ ಕುಮಾರ್ ಕಣಕ್ಕಿಳಿದಿದ್ದು ಪರಿಷತ್ ಚುನಾವಣಾ ತೀವ್ರ ಕುತೂಹಲ ಕೆರಳಿಸಿದೆ.

ಕಳೆದ ವಿಧಾನಸಭಾ ಚುನಾವಣೆಯಲ್ಲಿ ಸೋತಿದ್ದರೂ ಲಕ್ಷ್ಮಣ್ ಸವದಿಯವರನ್ನು ಸಚಿವರನ್ನಾಗಿ ಮಾಡಲಾಗಿದೆ. ವಿಧಾನಸಭೆ ಅಥವಾ ವಿಧಾನ ಪರಿಷತ್ ನ ಸದಸ್ಯರಲ್ಲದ ಸವಾಡಿಯವರು ಸಚಿವರಾಗಿ ಮುಂದುವರಿಯಬೇಕಿದ್ದರೆ ಇದೀಗ ಈ ಮೇಲ್ಮನೆ ಚುನಾವಣೆಯಲ್ಲಿ ಗೆಲ್ಲಲೇಬೇಕು.

ಈ ವರೆಗೂ ಅವಿರೋಧವಾಗಿ ಆಯ್ಕೆಯಾಗುವ ಲೆಕ್ಕಾಚಾರದಲ್ಲಿದ್ದ ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ ಅವರಿಗೆ ಆತಂಕ ಶುರುವಾಗಿದೆ. ಸಂಪುಟ ವಿಸ್ತರಣೆ ಹಿನ್ನೆಲೆಯಲ್ಲಿ ಉಂಟಾಗುವ ಅಸಮಾಧಾನದ ಪ್ರಯೋಜನ ಪಡೆಯುವ ಲೆಕ್ಕಾಚಾರದಲ್ಲಿ ಮೈತ್ರಿ ಅಭ್ಯರ್ಥಿಯನ್ನು ಕಣಕ್ಕೆ ಇಳಿಸಲಾಗಿದೆ. ಸಂಪುಟ ವಿಸ್ತರಣೆಯಲ್ಲಿ ಮಂತ್ರಿಸ್ಥಾನ ಸಿಗದವರಿಂದ ಬಿಜೆಪಿಯಲ್ಲಿ ಅಸಮಾಧಾನ ಹೆಚ್ಚಾದರೆ ಅದರ ನೇರ ಪರಿಣಾಮ ಪರಿಷತ್ ಚುನಾವಣೆ ಮೇಲಾಗಲಿದೆ.

ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ಎಚ್.ಡಿ. ದೇವೇಗೌಡ ಅವರ ಆಣತಿಯಂತೆ ಮೈತ್ರಿ ಅಭ್ಯರ್ಥಿಯನ್ನು ಕಾಂಗ್ರೆಸ್ ಕಣಕ್ಕೆ ಇಳಿಸಿದೆ. ತಾಂತ್ರಿಕ ತೊಂದರೆಗಳು ಆಗಬಾರದು ಎಂಬ ಕಾರಣಕ್ಕೆ ಪಕ್ಷೇತರ ಅಭ್ಯರ್ಥಿಯಾಗಿ ಅನಿಲ್ ಕುಮಾರ್ ನಾಮಪತ್ರ ಸಲ್ಲಿಸಿದ್ದಾರೆ.

ಪರಿಷತ್ ಚುನಾವಣೆಯಲ್ಲಿ ಗೌಪ್ಯ ಮತದಾನ ನಡೆಯಲಿದೆ. ಹಾಗಾಗಿ ಯಾವ ಶಾಸಕರು ಯಾರಿಗೆ ಮತ ಹಾಕುತ್ತಾರೆ ಎಂಬುದು ಬಹಿರಂಗವಾಗುವುದಿಲ್ಲ. ಹೀಗಾಗಿ ಅಡ್ಡಮತದಾನ ನಡೆಯುವ ಆತಂಕ ಇದೆ. ಒಂದು ವೇಳೆ ಬಿಜೆಪಿಯ ಅಸಮಾಧಾನಿತ ಶಾಸಕರು ಅಡ್ಡ ಮತದಾನ ಮಾಡಿದರೆ ಲಕ್ಷ್ಮಣ್ ಸವದಿ ಅವರ ಲೆಕ್ಕಾಚಾರ ತಲೆಕೆಳಗಾಗಲಿದೆ. ಹಾಗಾಗಿ ಸವದಿಯವರಿಗೆ ಸಹಜವಾಗಿಯೇ ಆತಂಕ ಕಾಡತೊಡಗಿದೆ.

Related posts