ಬೆಂಗಳೂರು: ಫೆ. 26ರಿಂದ ಮಾ. 4ರವರೆಗೆ 12ನೇ ಅಂತಾರಾಷ್ಟ್ರೀಯ ಸಿನಿಮೋತ್ಸವ ಹಮ್ಮಿಕೊಳ್ಳಲಾಗಿದೆ. ಬೆಂಗಳೂರಿನಲ್ಲಿ ನಡೆಯುವ ಚಿತ್ರೋತ್ಸವದಲ್ಲಿ ವಿಶ್ವದ 60 ರಾಷ್ಟ್ರಗಳ ಸುಮಾರು 200 ಚಿತ್ರಗಳು ಪ್ರದರ್ಶನಗೊಳ್ಳಲಿವೆ.
ಚಲನಚಿತ್ರ ಅಕಾಡೆಮಿಯ ಅಧ್ಯಕ್ಷ ಸುನಿಲ್ ಪುರಾಣಿಕ್ ಬೆಂಗಳೂರಿನಲ್ಲಿ ಈ ಕುರಿತು ಸುದ್ದಿಗಾರರಿಗೆ ವಿವರ ಒದಗಿಸಿದರು. ಫೆ. 26ರಂದು ಕಂಠೀರವ ಒಳಾಂಗಣ ಕ್ರೀಡಾಂಗಣದಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಚಲನಚಿತ್ರೋತ್ಸವ ಉದ್ಘಾಟಿಸಲಿದ್ದಾರೆ. ಸಮಾರೋಪ ಸಮಾರಂಭ ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ ನಲ್ಲಿ ನಡೆಯಲಿದ್ದು, ರಾಜ್ಯಪಾಲ ವಜೂಭಾಯ್ ವಾಲಾ ಅವರು ವಿಜೇತ ಚಿತ್ರಗಳಿಗೆ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ ಎಂದು ಸುನಿಲ್ ಪುರಾಣಿಕ್ ತಿಳಿಸಿದರು.
ಎಲ್ಲೆಲ್ಲಿ ಚಿತ್ರ ಪ್ರದರ್ಶನ?
ಬೆಂಗಳೂರಿನ ರಾಜಾಜಿನಗರದ ಒರಾಯನ್ ಮಾಲ್ ಪಿವಿಆರ್ ಸಿನಿಮಾದ 11 ಪರದೆಗಳು, ನವರಂಗ್ ಚಿತ್ರಮಂದಿರ, ಚಾಮರಾಜಪೇಟೆಯ ಕಲಾವಿದರ ಸಂಘದ ಕಟ್ಟದಲ್ಲಿನ ರಾಜ್ ಭವನ, ಸುಚಿತ್ರ ಚಿತ್ರ ಮಂದಿರಗಳಲ್ಲಿ ಚಿತ್ರಗಳು ಪ್ರದರ್ಶನಗೊಳ್ಳಲಿವೆ ಎಂದರು.
ಪ್ರಸಕ್ತ ಚಿತ್ರೋತ್ಸವದ ಭಾರತದ ಬಹು ಭಾಷಾ ಕಲಾವಿದರ ವಿಭಾಗದಲ್ಲಿ ಕನ್ನಡದ ಹಿರಿಯ ನಟ ಅನಂತನಾಗ್ ಅವರ ಚಿತ್ರಗಳ ಪುನರಾವಲೋಕನ ಏರ್ಪಡಿಸಲಾಗಿದೆ ಎಂದು ಸುನಿಲ್ ಪುರಾಣಿಕ್ ತಿಳಿಸಿದರು.