ಆಶಾ ಕಾರ್ಯಕರ್ತೆಯರಿಗೆ ಬೆದರಿಕೆ; ಕರಾವಳಿಯಲ್ಲೂ ಇಬ್ಬರ ಬಂಧನ

ಮಂಗಳೂರು: ಕೊರೋನಾ ಸೋಂಕು ನಿಯಂತ್ರಣ ಕಾರ್ಯದಲ್ಲಿ ವೈದ್ಯರಷ್ಟೇ ಅಲ್ಲ ಆಶಾ ಕಾರ್ಯಕರ್ತರ ಸೇವೆಯೂ ಪರಿಣಾಮಕಾರಿ. ಇಂತಹಾ ಆಶಾ ಕಾರ್ಯಕರ್ತೆಯರನ್ನೇ ಒಂದು ವರ್ಗ ಟಾರ್ಗೆಟ್ ಮಾಡುತ್ತಿರುವುದು ದುರ್ದೈವದ ಸಂಗತಿ.

ಗುರುವಾರ ಬೆಂಗಳೂರಿನ ಸಾಘಿಕ್ ನಗರದಲ್ಲಿ ಸಮೀಕ್ಷೆ ನಿರತ ಆಶಾಕಾರ್ಯಕರ್ತೆಯರ ಮೇಲಿನ ದಾಳಿ ಘಟನೆ ನಂತರ ದಕ್ಷಿಣಕನ್ನಡ ಜಿಲ್ಲೆಯಲ್ಲೂ ಆಶಾ ಕಾರ್ಯಕರ್ತೆಯರನ್ನು ಟಾರ್ಗೆಟ್ ಮಾಡಿರುವ ಪ್ರಕರಣ ಬೆಳಕಿಗೆ ಬಂದಿದೆ.

ಆಶಾ ಕಾರ್ಯಕರ್ತೆ ತುಳಸಿ ಎಂಬವರು ಕೊರೋನಾ ವೈರಸ್ ಕುರಿತ ಮುಂಜಾಗೃತಾ ಕಾರ್ಯದಲ್ಲಿ ತೊಡಗಿದ್ದಾರೆ. ಕೆಲದಿನಗಳ ಹಿಂದೆ ವಿದೇಶದಿಂದ ಆಗಮಿಸಿರುವ ಕಿನ್ನಿಬೆಟ್ಟು ಸಮೀಪದ ನಿತೇಶ ಹಾಗೂ ಕಲಾಯಿ ಸಮೀಪದ ನಿವಾಸಿ ಜಯಂತ ಎಂಬವರಿಯ ಆರೋಗ್ಯ ಮಾಹಿತಿ ಸಂಗ್ರಹಿಸಿದ್ದರು. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿ ನಿತೇಶ ಎಂಬಾತನ ಸಂಬಂಧಿ ಬಂಟ್ವಾಳ ಅಮ್ಟಾಡಿ ನಿವಾಸಿಗಳಾದ ಮಾರಪ್ಪ ಪೂಜಾರಿ ಹಾಗೂ ಉಮೇಶ ಎಂಬವರು ಆಶಾ ಕಾರ್ಯಕರ್ತೆಗೆ ಕರೆಮಾಡಿ ನಿಂದಿಸಿದ್ದಾರೆನ್ನಲಾಗಿದೆ. ಈ ಬಗ್ಗೆ ಆಶಾ ಕಾರ್ಯಕರ್ತೆ ಪೊಲೀಸರಿಗೆ ದೂರು ನೀಡಿದ್ದರು.

ಪ್ರಕರಣ ದಾಖಲಿಸಿಕೊಂಡಿರುವ ಬಂಟ್ವಾಳ ನಗರ ಠಾಣೆಯ ಪೊಲೀಸರು ಅಮ್ಟಾಡಿ ನಿವಾಸಿಗಳಾದ ಮಾರಪ್ಪ ಪೂಜಾರಿ ಹಾಗೂ ಉಮೇಶ ಎಂಬಿಬ್ಬರನ್ನು ಬಂಧಿಸಿದ್ದಾರೆ.

Related posts