ಶಿವಮೊಗ್ಗ: ದಾವಣಗೆರೆ ಜಿಲ್ಲೆಯಲ್ಲಿ ಹಕ್ಕಿಜ್ವರದ ಕಾರಣದಿಂದ ಶಿವಮೊಗ್ಗ ಜಿಲ್ಲೆಯಲ್ಲಿ ಕೋಳಿ ಮಾಂಸ ಮತ್ತು ಮೊಟ್ಟೆ ಮಾರಾಟಕ್ಕಿದ್ದ ನಿರ್ಬಂಧವನ್ನು ತೆರವುಗೊಳಿಸಲಾಗಿದೆ.
ಹಕ್ಕಿಜ್ವರದ ಹೊಸ ಪ್ರಕರಣಗಳು ವರದಿಯಾಗದಿರುವ ಹಿನ್ನೆಲೆಯಲ್ಲಿ ಶಿವಮೊಗ್ಗ ಜಿಲ್ಲೆಯಲ್ಲಿ ಕೋಳಿ ಮಾಂಸ ಮತ್ತು ಮೊಟ್ಟೆ ಮಾರಾಟವನ್ನು ಇಂದಿನಿಂದ ಆರಂಭಿಸಲು ನಿರ್ಧರಿಸಲಾಗಿದೆ ಎಂದು ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್.ಈಶ್ವರಪ್ಪ ತಿಳಿಸಿದ್ದಾರೆ.
ಕೊಳೆಗೇರಿ ನಿವಾಸಿಗಳು ಸೇರಿದಂತೆ ಬಡವರಿಗೆ ಪ್ರತಿ ಕುಟುಂಬಕ್ಕೆ ಒಂದು ಲೀಟರ್ ಹಾಲು ವಿತರಿಸಲಾಗುತ್ತಿದೆ. ಶಿವಮೊಗ್ಗ ನಗರದಲ್ಲಿ 56 ಅಧಿಕೃತ ಕೊಳಗೇರಿಗಳಿದ್ದು, ಅಧಿಸೂಚಿತವಲ್ಲದ ಕೊಳಗೇರಿಗಳು, ಕಟ್ಟಡ ಕಾರ್ಮಿಕರ ವಸತಿ ತಾಣಗಳು ಮತ್ತು ವಲಸಿಗ ಕಾರ್ಮಿಕರಿಗಾಗಿ ಸರ್ಕಾರದ ವತಿಯಿಂದ ಪ್ರಾರಂಭಿಸಲಾಗಿರುವ ತಾತ್ಕಾಲಿಕ ಪುನರ್ವಸತಿ ಶಿಬಿರಗಳ ನಿವಾಸಿಗಳ ಕುಟುಂಬಕ್ಕೆ ಸಹ ಪ್ರತಿ ದಿನ ಉಚಿತವಾಗಿ ಹಾಲು ವಿತರಿಸಲಾಗುತ್ತಿದೆ. ಇದಕ್ಕಾಗಿ ಸ್ವಯಂ ಸೇವಕರ ನೆರವನ್ನು ಪಡೆಯಲಾಗುವುದು ಎಂದು ಈಶ್ವರಪ್ಪ ತಿಳಿಸಿದರು.
ತರಕಾರಿ ಮತ್ತು ಹಣ್ಣು ಮಾರಾಟವನ್ನು ಸುಗಮವಾಗಿ ಮಾಡಲು ಕ್ರಮ ಕೈಗೊಳ್ಳಲಾಗಿದೆ. ಶಿವಮೊಗ್ಗ ನಗರ ವ್ಯಾಪ್ತಿಯಲ್ಲಿ ಮಹಾನಗರ ಪಾಲಿಕೆ ವತಿಯಿಂದ 43 ತಳ್ಳು ಗಾಡಿಗಳಿಗೆ ತರಕಾರಿ ಮಾರಾಟಕ್ಕೆ ಅನುಮತಿ ನೀಡಲಾಗಿದೆ. ಹಾಪ್‍ಕಾಮ್ಸ್ ವತಿಯಿಂದ ಹಣ್ಣುಹಂಪಲು ಮಾರಾಟಕ್ಕೆ ಈಗಾಗಲೇ 30 ವಾಹನಗಳಿಗೆ ಅನುಮತಿ ನೀಡಲಾಗಿದ್ದು, ಇನ್ನೂ 20 ವಾಹನಗಳಿಗೆ ಅನುಮತಿಯನ್ನು ನೀಡಲಾಗುವುದು. ಈ ವಾಹನಗಳಲ್ಲಿ ದರಪಟ್ಟಿ ಲಗತ್ತಿಸಲಾಗಿದ್ದು, ಸಾರ್ವಜನಿಕರು ಅದರಂತೆ ದರವನ್ನು ಪಾವತಿಸಬೇಕು ಎಂದು ಸಚಿವರು ಹೇಳಿದರು.