ಶುಲ್ಕ ಪಾವತಿ ವಿಚಾರ; ಖಾಸಗಿ ಶಾಲೆಗಳಿಗೆ ಸಚಿವ ಸುರೇಶ ಕುಮಾರ್ ಎಚ್ಚರಿಕೆಯ ಸಂದೇಶ

ಬೆಂಗಳೂರು: ಕೊರೊನಾ ಮಹಾಮಾರಿಯ ಹಾವಳಿ ಹಿನ್ನೆಲೆಯಲ್ಲಿ ಶಿಕ್ಷಣ ಇಲಾಖೆಯು ರಾಜ್ಯದ ಶಾಲಾ ಶಿಕ್ಷಣ ಸಂಸ್ಥೆಗಳ ಕಾರ್ಯ ಚಟುವಟಿಕೆ ಹಾಗೂ ನಿರ್ಧಾರಗಳ ಬಗ್ಗೆ ತೀವ್ರ ನಿಗಾ ವಹಿಸಿದೆ. ಅದರಲ್ಲೂ ಶಿಸ್ತಿನ ಸಿಪಾಯಿಯಂತೆ ಕ್ಷಣ ಕ್ಷಣದ ಮಾಹಿತಿ ತರಿಸಿಕೊಳ್ಳುತ್ತಿರುವ ಶಿಕ್ಷಣ ಸಚಿವ ಸುರೇಶ ಕುಮಾರ್, ತಪ್ಪುಗಳು ಕಂಡುಬಂದರೆ ಅಂತಹಾ ಶಾಲೆಗಳ ಆಡಳಿತ ಮಂಡಳಿ ಮುಖ್ಯಸ್ಥರತ್ತ ಚಾಟಿ ಬೀಸುತ್ತಲೇ ಇದ್ದಾರೆ.

ಇದೀಗ ಕೊರೋನಾ ನಿಯಂತ್ರಣ ಸಂಬಂಧ ರಾಜ್ಯಾದ್ಯಂತ ಸಂಪೂರ್ಣ ಲಾಕ್‌ಡೌನ್ ಜಾರಿಯಲ್ಲಿರುವಾಗ ಶಾಲಾ ಮಕ್ಕಳ ಶುಲ್ಕ ಪಾವತಿ ಮಾಡುವಂತೆ ಒತ್ತಡ ಹೇರಿದರೆ ಜೋಕೆ ಎಂದು ಸಚಿವರು ಎಚ್ಚರಿಕೆ ನೀಡಿದ್ದಾರೆ. ಒಂದು ವೇಳೆ, ಶುಲ್ಕ ವಿಚಾರದಲ್ಲಿ ಸರ್ಕಾರದ ಸೂಚನೆ ಮೀರಿದರೆ ಅಂತಹಾ ಖಾಸಗಿ ಶಾಲೆಗಳ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂಬ ಸಂದೇಶವನ್ನು ಸಚಿವರು ರವಾನಿಸಿದ್ದಾರೆ.

ಈ ಸಂಬಂಧ ಶಿಕ್ಷಣ ಸಚಿವ ಸುರೇಶ ಕುಮಾರ್ ಅವರು ಸೋಮವಾರ ಫೇಸ್‌ಬುಕ್ ಲೈವ್’ನಲ್ಲಿ ಹಂಚಿಕೊಂಡ ಕೆಲವು ವಿಷಯಗಳು ಶಿಕ್ಷಣ ಕ್ಷೇತ್ರದ ಕುತೂಹಲದ ಕೇಂದ್ರಬಿಂದುವಾದವು. ಮುಂಬರುವ ಶೈಕ್ಷಣಿಕ ವರ್ಷ ಅಂದರೆ, 2020- 21ನೇ ಸಾಲಿನ ಶುಲ್ಕವನ್ನು ಏಪ್ರಿಲ್‌ 11 ರ ಒಳಗಾಗಿ ಪೋಷಕರು ಪಾವತಿ ಮಾಡಬೇಕು ಎಂದು ಕೆಲವು ಖಾಸಗಿ ಶಾಲೆಗಳು ಕಟ್ಟಪ್ಪಣೆ ಮಾಡುತ್ತಿವೆ. ಜೊತೆಗೆ ದುಬಾರಿ ದಂಡದ ಎಚ್ಚರಿಕೆಯನ್ನೂ ನೀಡುತ್ತಿವೆ. ಇಂತಹಾ ಪರಿಸ್ಥಿತಿಯಲ್ಲಿ ಶಾಲಾ ಮುಖ್ಯಸ್ಥರ ಈ ರೀತಿಯ ನಡೆ ಸರಿಯಲ್ಲ ಎಂದು ಸಿಡಿಮಿಡಿಗೊಂಡರು. ಈ ಸಂದಿಗ್ಧ ಪರಿಸ್ಥಿತಿಯಲ್ಲಿ ಸರ್ಕಾರದ ಸೂಚನೆ ಮೀರಿ ಖಾಸಗಿ ಶಾಲೆಗಳು ಉದ್ಧಟತನ ತೋರಿದರೆ ಸರ್ಕಾರ ಸೂಕ್ತ ಕ್ರಮ ಕೈಗೊಳ್ಳುತ್ತದೆ ಎಂದರು. ಅಗತ್ಯ ಬಿದ್ದರೆ ಮಾನ್ಯತೆ ರದ್ದು ಮಾಡಲು ಹಿಂದೇಟು ಹಾಕಲ್ಲ ಎಂದು ಎಚ್ಚರಿಕೆಯನ್ನು ಸಚಿವ ಸುರೇಶ್ ಕುಮಾರ್ ನೀಡಿದ್ದಾರೆ.

ಇದೆ ವೇಳೆ, ಕೊರೋನಾ ಹಾವಳಿ ಹಿನ್ನೆಲೆಯಲ್ಲಿ ಶಿಕ್ಷಕರಿಗೆ ನೀಡಲಾಗಿರುವ ರಜೆಯನ್ನು ಏಪ್ರಿಲ್‌ 11 ರ ವರೆಗೆ ವಿಸ್ತರಣೆ ಮಾಡಲಾಗಿದೆ ಎಂದು ಅವರು ತಿಳಿಸಿದರು. ಆದರೆ ಅಗತ್ಯ ಸಂದರ್ಭದಲ್ಲಿ ಕೆಲಸಕ್ಕೆ ಹಾಜರಾಗಬೇಕೆಂದು ಸೂಚನೆ ಬಂದಲ್ಲಿ ಅದನ್ನು ಪಾಲಿಸಬೇಕೆಂದೂ ಅವರು ಕರೆ ಕೊಟ್ಟರು. .

Related posts