ಬೆಂಗಳೂರು: ಮಾಜಿ ಕೇಂದ್ರಸಚಿವ ಜನಾರ್ಧನ ಪೂಜಾರಿಯವರು ಕಾಂಗ್ರೆಸ್ ಪಕ್ಷದ ಚಿಪ್ಪಿನೊಳಗೆ ಅವಿತಿರುವ ಅಪರೂಪದ ಮುತ್ತು. ಸಾಮಾಜಿಕ ಕಳಕಳಿಯುಳ್ಳ ನಿಷ್ಟೂರ ರಾಜಕಾರಣಿ ಎಂದೇ ಗುರುತಾಗಿರುವ ಅಪರೂಪದ ವ್ಯಕ್ತಿತ್ವದ ಈ ನಾಯಕ ಈಗ ರಾಜಕೀಯ ಅಖಾಡದಿಂದ ದೂರ ಉಳಿದಿದ್ದಾರೆ.
ದಶಕಗಳ ಹಿಂದೆ ಕಡು ಬಡವರನ್ನು ಸ್ವಾವಲಂಬಿಗಳನ್ನಾಗಿಸಲು ಅವರು ಕೇಂದ್ರ ಹಣಕಾಸು ಸಚಿವರಾಗಿದ್ದಾಗ ಜಾರಿಗೆ ತಂದ ಸಾಲ ಮೇಳ ಇಂದಿಗೂ ಮೈಲಿಗಲ್ಲು. ಆರೆಸ್ಸೆಸ್’ನ ಎದುರಾಳಿ ಪಕ್ಷದ ನಾಯಕರಾಗಿದ್ದರೂ ಇವರಿಗಿರುವ ಅಭಿಮಾನಿಗಳ ಪೈಕಿ ಆರೆಸ್ಸೆಸ್ ಕಾರ್ಯಕರ್ತರೇ ಹೆಚ್ಚು ಮಂದಿ. ಅವರ ಭ್ರಷ್ಟಾತೀತ ನಡೆಯೇ ಎಲ್ಲರಿಗೂ ಮಾದರಿ. ಈ ಬಗ್ಗೆ ಅವರ ಎದುರಾಳಿಯಾಗಿ ನಿಂತು ಗೆದ್ದಿರುವ ಸಂಸದ ನಳಿನ್ ಕುಮಾರ್ ಆಗಾಗ್ಗೆ ಹೇಳುತ್ತಿರುತ್ತಾರೆ.
ಇದನ್ನೂ ಓದಿ.. ಕ್ಯಾನ್ಸರ್ ಪೀಡಿತೆಗೆ ಜೀವಔಷಧಿ ತರಿಸಿದ ಕ್ಲೈಮ್ಯಾಕ್ಸ್; ಕರಾವಳಿ ಶಾಸಕರ ಸಾಹಸಗಾಥೆ
ವಯೋ ಸಹಜ ಪರಿಸ್ಥಿತಿ ಹಿನ್ನೆಲೆಯಲ್ಲಿ ಸಕ್ರಿಯ ರಾಜಕಾರಣದಲ್ಲಿ ಇಲ್ಲವಾದರೂ ಸಾಮಾಜಿಕ ಹಿತಾಸಕ್ತಿಗೆ ವಿರುದ್ಧವಾಗಿ ನಡೆದುಕೊಳ್ಳುವ ರಾಜಕಾರಣಿಗಳಿಗೆ ಅವರು ಆಗೊಮ್ಮೆ ಈಗೊಮ್ಮೆ ಮಾತಿನ ಚಾಟಿ ಬೀಸುತ್ತಲೇ ಇದ್ದಾರೆ.
ಹೊಗಳಿಕೆಗೂ ಬೀಗದ, ಟೀಕೆಗೂ ಜಗ್ಗದ ಜನಾರ್ಧನ ಪೂಜಾರಿ ಅವರ ಹುಟ್ಟುಹಬ್ಬ ಸಂದರ್ಭದಲ್ಲಿ ಅವರಿಗೆ ಸಾಮಾಜಿಕ ಜಾಲತಾಣಗಳಲ್ಲಿ ಶುಭ ಹಾರೈಸಿದವರಲ್ಲೂ ಬಿಜೆಪಿ ಕಾರ್ಯಕರ್ತರೇ ಹೆಚ್ಚು ಮಂದಿ.
ಈ ಬಗ್ಗೆ ಬರಹಗಾರರೊಬ್ಬರು ಜನಾರ್ಧನ ಪೂಜಾರಿ ಬಗ್ಗೆ ಬರೆದು ಹರಿಯಬಿಟ್ಟಿರುವ ಸಾಲುಗಳು ಸಿಕ್ಕಾಪಟ್ಟೆ ವೈರಲ್ ಆಗುತ್ತಿವೆ. ಈ ಬರಹ ಬಹು ಜನರ ಮೆಚ್ಚುಗೆಗೂ ಪಾತ್ರವಾಗಿದೆ.
ಇಂದಿನ ಐಕಾನ್ – ನಾಡು ಕಂಡ ಶ್ರೇಷ್ಠ ಸಮಾಜ ಸುಧಾರಕ ಜನಾರ್ದನ ಪೂಜಾರಿ.
ಸರ್, ನಿಮ್ಮನ್ನು ಏನೆಂದು ಕರೆಯಲಿ? ಪ್ರಭಾವಿ ರಾಜಕೀಯ ಧುರೀಣನೆಂದೋ? ಮುತ್ಸದ್ದಿ ಎಂದೋ? ಕಾಂಗ್ರೆಸ್ ನಾಯಕ ಎಂದೋ? ಸರಣಿ ಸಾಲಮೇಳಗಳ ಸರದಾರ ಎಂದೋ? ಕುದ್ರೋಳಿ ದೇವಳದ ಜೀರ್ಣೋದ್ಧಾರದ ರೂವಾರಿ ಎಂದೋ? ಪ್ರವಾಹದ ವಿರುದ್ಧ ಈಜುವ ಸಮಾಜ ಸುಧಾರಕ ಎಂದೋ? ಎಲ್ಲದಕ್ಕೂ ನೀವು ಹೊಂದಿಕೆ ಆಗುತ್ತೀರಿ. ಆದರೆ ಕೊನೆಯದು ಹೆಚ್ಚು ಸರಿ ಎಂದು ನನಗನ್ನಿಸುತ್ತದೆ!
45 ವರ್ಷಗಳ ರಾಜಕೀಯ ಜೀವನದಲ್ಲಿ ಒಂದೇ ಒಂದು ಕಪ್ಪುಚುಕ್ಕೆ ಇಲ್ಲದೇ, ಹಗರಣ ಇಲ್ಲದೇ ನಿಲ್ಲುವುದಿದೆಯಲ್ಲ, ನೀವು ನಿಜವಾಗಿಯೂ ಗ್ರೇಟ್! ಇಂದಿರಾ ಗಾಂಧಿ, ರಾಜೀವ ಗಾಂಧಿ, ನರಸಿಂಹ ರಾವ್ ಅವರ ಸಂಪುಟಗಳಲ್ಲಿ ಅತ್ಯಂತ ಪ್ರಭಾವೀ ಖಾತೆಗಳನ್ನು ಯಶಸ್ವಿಯಾಗಿ ನಿರ್ವಹಣೆ ಮಾಡಿಯೂ ತನಗಾಗಿ ಏನೂ ಮಾಡದೇ, ಸಮಾಜದ ಕಟ್ಟ ಕಡೆಯ ವ್ಯಕ್ತಿಯ ಹಿತವನ್ನು ಕಾಯುವ ಕಾಯಕನಿಷ್ಟೆ ಇವತ್ತು ಎಷ್ಟು ರಾಜಕಾರಣಿಗಳಿಗೆ ಇದೆ? ನಾನು ಸಾಯುವ ತನಕ ಕಾಂಗ್ರೆಸ್ಸಿಗ ಎಂದು ಅಭಿಮಾನ ಪೂರ್ವಕವಾಗಿ ಘೋಷಿಸುವ ನಿಮ್ಮ ಪಕ್ಷನಿಷ್ಠೆ ಎಲ್ಲರಿಗೂ ಮಾದರಿ ಸರ್.
ಅತ್ಯಂತ ತುಳಿತಕ್ಕೊಳಗಾದ ಬಡ ಕುಟುಂಬದಲ್ಲಿ ಹುಟ್ಟಿದ ನೀವು ಬಾಲ್ಯದ ಕಹಿನೆನಪನ್ನು ಮೀರಿ ಬೆಳೆದವರು.1960ರಿಂದ 1979ರವರೆಗೆ ಮಂಗಳೂರಲ್ಲಿ ವಕೀಲರಾಗಿ ನೀವು ವಾದಿಸಿದ್ದು ಬಡವರ ಪರವಾಗಿ! ಇಂದಿರಾ ಗಾಂಧಿಯವರ ಭೂಸುಧಾರಣೆ ಕಾನೂನಿನ ಮೂಲಕ ಕರಾವಳಿ ಭಾಗದಲ್ಲಿ ಬಡವರಿಗೆ ನ್ಯಾಯ ಕೊಡಿಸಿದ ಉದಾಹರಣೆಗಳು ನೂರಾರು. ಮುಂದೆ ಕಾಂಗ್ರೆಸ್ ಪಕ್ಷದಿಂದ ಮಂಗಳೂರು ಲೋಕ ಸಭಾ ಕ್ಷೇತ್ರದಿಂದ ಸತತವಾಗಿ ಆಯ್ಕೆಯಾದಿರಿ. ಕುದುರೆಮುಖ ಕಬ್ಬಿಣದ ಅದಿರು ಕಂಪೆನಿ, MRPL, ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ, NITK ಉನ್ನತೀಕರಣ, ಬಂಟ್ವಾಳ್ ಸುರತ್ಕಲ್ ನಡುವಿನ ಚತುಷ್ಪಥ ರಸ್ತೆ, ಮಂಗಳೂರು ಬೆಂಗಳೂರು ರೈಲು…ಇಂತಹ ಜನಪರವಾದ ಯೋಜನೆಗಳು ನಿಮ್ಮಿಂದ ಆಗಿರುವುದನ್ನು ನಾವು ಕಂಡಿದ್ದೇವೆ. ಇದನ್ನೆಲ್ಲ ಮರೆಯುವುದು ಹೇಗೆ?
ಇಂದಿರಾಗಾಂಧಿ ಅವರು ಬ್ಯಾಂಕುಗಳ ರಾಷ್ಟ್ರೀಕರಣ ಮಾಡಿದ ಬೆನ್ನಿಗೇ ನಿಮ್ಮ ಮೇಲೆ ವಿಶ್ವಾಸ ಇರಿಸಿ ಕೇಂದ್ರದ ಹಣಕಾಸುಮಂತ್ರಿ ಮಾಡಿದರು. ಆಗ ನೀವು ದೇಶದಾದ್ಯಂತ ನಡೆಸಿದ ಸರಣಿ ಸಾಲಮೇಳಗಳ ಯಶಸ್ಸು ನಿಮಗೇ ಸಲ್ಲಬೇಕು. ಅದುವರೆಗೆ ಶ್ರೀಮಂತರ ಪರವಾಗಿದ್ದ ಬ್ಯಾಂಕುಗಳನ್ನು ಬಡವರ ಪರವಾಗಿ ನಿಲ್ಲಿಸಿದ್ದು ನೀವು! ಬ್ಯಾಂಕುಗಳನ್ನು ಬೀದಿಗೆ ತರುತ್ತಿದ್ದಾರೆ ಎಂಬ ಶ್ರೀಮಂತರ ಟೀಕೆಗಳಿಗೆ ಕಿವಿಗೊಡದೆ ಬಂಡೆಯಂತೆ ನಿಂತವರು ನೀವು. ಜೀವ ಬೆದರಿಕೆಗೆ ಸೊಪ್ಪು ಹಾಕದವರು ನೀವು. ನಿಮ್ಮ ಮೇಲೆ ದೈಹಿಕ ಹಲ್ಲೆ ನಡೆದರೂ, ಇರಿತಗಳಾದರೂ ಒಂದಿಷ್ಟೂ ವಿಚಲಿತರಾಗದೆ ನಿಂತ ನಿಮಗೆ ಖಂಡಿತವಾಗಿ ಅಭಿನಂದನೆ ಸರ್!
ಪ್ರವಾಹದ ವಿರುದ್ಧ ಈಜುವ, ಆತ್ಮಸಾಕ್ಷಿಗೆ ಸರಿಯಾಗಿ ನಡೆವ, ನಿಮ್ಮ ಈ ಗುಣವೇ ನಿಮ್ಮನ್ನು ಐಕಾನ್ ಮಾಡಿದ್ದು!
ಎಪ್ಪತ್ತರ ದಶಕದಲ್ಲಿ ನಿಮ್ಮ ಬಳಿ ಕಾಲೇಜು ಸೀಟು ಕೊಡಿಸಿ ಎಂದು ಬಡವರು ಕೇಳಿಕೊಂಡು ಬರುತ್ತಿದ್ದರು. ಆಗ ನೀವು ಶಿಫಾರಸು ಪತ್ರ ಬರೆದುಕೊಟ್ಟು ಅವರನ್ನು ಕಾಲೇಜಿಗೆ ಕಳುಹಿಸಿ ಕೊಡುತ್ತಿದ್ದೀರಿ. ಆಗ ಶ್ರೀಮಂತ ಕಾಲೇಜುಗಳು ನಿಮ್ಮ ವಿನಂತಿಗೆ ಸೊಪ್ಪು ಹಾಕದೆ ಬಡವರಿಗೆ ಸೀಟ್ ನಿರಾಕರಿಸಿದಾಗ ನೀವು ಧರಣಿ ನಡೆಸಲಿಲ್ಲ. ಪ್ರತಿಭಟನೆ ಮಾಡಲಿಲ್ಲ. ಗೆಳೆಯರನ್ನು ಒಗ್ಗೂಡಿಸಿ ಸ್ವಾಭಿಮಾನದ ಗೋಕರ್ಣನಾಥೇಶ್ವರ ಕಾಲೇಜು ಆರಂಭ ಮಾಡಿದಿರಿ. ನಿಮಗೆ ಹ್ಯಾಟ್ಸಪ್ ಸರ್!
ಇಂದು ಬಹಳ ಜನ ನಿಮ್ಮನ್ನು ನೆನೆಯುವುದು ಕುದ್ರೋಳಿ ಶ್ರೀ ಗೋಕರ್ಣನಾಥೇಶ್ವರ ಕ್ಷೇತ್ರದ ನವೀಕರಣದ ರೂವಾರಿ ಎಂದು. ಅದು ನೂರಕ್ಕೆ ನೂರು ನಿಜ. ಬಹಳ ಕಷ್ಟದಿಂದ ಹಣ ಸಂಗ್ರಹಿಸಿ, ಶ್ರೇಷ್ಟ ಶಿಲ್ಪಿಗಳನ್ನು ಒಂದೆಡೆ ಸೇರಿಸಿ, ಆಧುನಿಕತೆಯ ಎರಕದಿಂದ ಆ ಕ್ಷೇತ್ರವನ್ನು ಎದ್ದು ನಿಲ್ಲಿಸಿದವರು ನೀವು. ಇಂದು ಮಂಗಳೂರು ದಸರಾ ಉತ್ಸವ ನಾಡಿನಾದ್ಯಂತ ಬಹಳ ಹೆಸರು ಮಾಡಿದೆ. ಅದಕ್ಕೆ ಸ್ಫೂರ್ತಿ ನೀವು. ಅದೇ ರೀತಿ ಕನ್ಯಾಡಿ ರಾಮ ಮಂದಿರ, ಕಂಕನಾಡಿ ಗರಡಿ, ಕಟಪಾಡಿ ವಿಶ್ವನಾಥ ಕ್ಷೇತ್ರ, ನೂರಾರು ಗರಡಿ, ಮಂದಿರಗಳ …ಅಭಿವೃದ್ಧಿಯಲ್ಲಿ ನೀವು ಮುಂದೆ ನಿಂತವರು.
ಶ್ರೀ ನಾರಾಯಣ ಗುರುಗಳು ತೋರಿದ ದಾರಿಯಲ್ಲಿ, ಅವರ ತತ್ವಗಳ ಬೆಳಕಲ್ಲಿ ನಡೆದಿರಿ. ಸಾಕಷ್ಟು ಪ್ರತಿಭಟನೆ ನಡೆದರೂ ವಿಚಲಿತರಾಗದೆ ವಿಧವೆಯರನ್ನು ಅರ್ಚಕರಾಗಿ ನೇಮಿಸಿದ್ದು, ವಿಧವೆಯರಿಗೆ ಸೀರೆ, ಹೂವು ಕ್ಷೇತ್ರದಲ್ಲಿ ನೀಡಿದ್ದು, ಅವರ ಕೈಗಳಿಂದ ರಥವನ್ನು ಎಳೆದದ್ದು, ಯಜ್ಞಕ್ಕೆ ಪೂರ್ಣಾಹುತಿ ಕೊಡಿಸಿದ್ದು..ಓಹ್! ಅದಕ್ಕೆ ನಾನು ನಿಮ್ಮನ್ನು ನಾಡಿನ ಶ್ರೇಷ್ಟ ಸಮಾಜ ಸುಧಾರಕ ಎಂದು ಅಭಿಮಾನದಿಂದ ಕರೆದದ್ದು! ಗುರುಗಳು ಹೇಳಿದ್ದನ್ನು ಮಾತ್ರ ನಾನು ಮಾಡುತಿದ್ದೇನೆ ಎಂದು ನುಡಿಯುವ, ಅದರಂತೆ ನಡೆಯುವ ನೀವು ನಿಜದ ಅರ್ಥದಲ್ಲಿ ಲೆಜೆಂಡ್ ಸರ್!
ಅರ್ಧ ಶತಮಾನವನ್ನು ರಾಜಕೀಯದಲ್ಲಿ ಕಳೆದರೂ ಇಂದಿಗೂ ಸರಳವಾಗಿ ಒಂದು ಸಣ್ಣ ಮನೆಯಲ್ಲಿ ವಾಸಿಸುವ, ಹಳೆಯ ಕಾರಿನಲ್ಲಿ ಓಡಾಡುವ, ತನ್ನ ಪಿಂಚಣಿಯ ಹಣವನ್ನು ಕೂಡ ಬಡವರಿಗೆ ಹಂಚುವ, ತನ್ನ ಹುಟ್ಟುಹಬ್ಬವನ್ನು ಯಾರೂ ಆಚರಿಸುವುದು ಬೇಡ ಎಂದು ಹೇಳುವ, ನೊಂದವರ, ಆಶಕ್ತರ ಮತ್ತು ತುಳಿತಕ್ಕೊಳಗಾದವರ ಪರವಾಗಿ ಇಂದಿಗೂ ಸಿಡಿದು ನಿಲ್ಲುವ ನಿಮಗೆ ಇಂದು ಹುಟ್ಟಿದ ಹಬ್ಬ ಸರ್! ದೇವರು ನಿಮಗೆ ಇನ್ನಷ್ಟು ಶಕ್ತಿ ಕೊಡಲಿ.
ರಾಜೇಂದ್ರ ಭಟ್ ಕೆ.
ಇದನ್ನೂ ಓದಿ.. ಲಾಕ್’ಡೌನ್ ಅವಾಂತರ; ಮೋದಿಗೆ ಸೆಡ್ಡು ಹೊಡೆದ್ರಾ ನಾರಾಯಣ