ಮಂಗಳೂರು: ಜಗತ್ತಿನಾದ್ಯಂತ ಕೊರೋನಾ ವೈರಾಣು ಮರಣ ಮೃದಂಗವನ್ನೇ ಭಾರಿಸುತ್ತಿದೆ. ಭಾರತದಲ್ಲೂ ನಿತ್ಯವೂ ಆತಂಕದ ಪರಿಸ್ಥಿತಿ ಇದ್ದು ಲಾಕ್’ಡೌನ್ ಜಾರಿಯಲ್ಲಿದೆ. ಎಲ್ಲರೂ ದಿಗ್ಬಂಧನದ ಸುಳಿಯಲ್ಲಿ ಸಿಲುಕಿದ್ದು, ಕಾಯಿಲೆಗೆ ತುತ್ತಾಗಿರುವ ಅನೇಕರು ಔಷಧಿಗಾಗಿ ಪರದಾಡುತ್ತಿದ್ದಾರೆ.
ಕರಾವಳಿ ಜಿಲ್ಲೆಗಳಲ್ಲಂತೂ ಕೊರೋನಾ ಆತಂಕ ಹೆಚ್ಚಾಗಿದ್ದು ಬಹಳಷ್ಟು ಜನ ಸಂಕಷ್ಟದಲ್ಲಿದ್ದಾರೆ. ಅದರಲ್ಲೂ ಸಕಾಲದಲ್ಲಿ ಔಷಧಿ ಸಿಗದೇ ಅತೀವ ನೋವು ಅನುಭವಿಸುತ್ತಿರುವವರೂ ಬಹಳಷ್ಟು ಮಂದಿ. ಇಂತಹಾ ಅಸಹಾಯಕ ಮಹಿಳೆ ಪಾಲಿಗೆ ನೆರವಾಗುವ ಮೂಲಕ ಮಂಗಳೂರು ಉತ್ತರದ ಶಾಸಕರು ಪ್ರಶಂಸೆಗೆ ಪಾತ್ರರಾಗಿದ್ದಾರೆ.
ಸುರತ್ಕಲ್ ಸಮೀಪದ ಕ್ಯಾನ್ಸರ್ ಪೀಡಿತೆಗೆ ಆ ಒಂದು ಜೀವಔಷಧಿ ಬೇಕೇ ಬೇಕಿತ್ತು. ಅದು ಅವರ ಜೀವದ ಉಳಿವಿನ ಪ್ರಶ್ನೆಯಾಗಿತ್ತು. ಲಾಕ್’ಡೌನ್ ಸಮಯದಲ್ಲಿ ಔಷಧಿ ತರಲು ವಾಹನವಿಲ್ಲ. ಕೊರಿಯರ್ ವ್ಯವಸ್ಥೆಯಿರಲಿಲ್ಲ. ಈ ಸಂದರ್ಭದಲ್ಲಿ ವೈದ್ಯರೂ ಆಗಿರುವ ಶಾಸಕ ಡಾ.ಭರತ್ ಶೆಟ್ಟಿ ಕ್ಯಾನ್ಸರ್ ಪೀಡಿತೆಗೆ ಮುಂಬಯಿಯಿಂದ ಅಗತ್ಯ ಔಷದಿ ತರಿಸಿಕೊಂಡ ಅಪರೂಪದ ಪ್ರಸಂಗ ನಡೆದಿದೆ.
ಇದನ್ನೂ ಓದಿ.. ಕೊರೋನಾ ಸೋಂಕಿತರಿಗೆ ವಿಷ ಪ್ರಾಶನ ಮಾಡಲು ಸೂಚಿಸಿದರೇ ಟ್ರಂಪ್?
ಕ್ಷೇತ್ರದಲ್ಲಿರುವ ಕ್ಯಾನ್ಸರ್ ಪೀಡಿತೆಯ ಸಂಬಂಧಿ ಕರೆ ಮಾಡಿ ಹೇಗಾದರೂ ಮಾಡಿ ಮೆಡಿಸಿನ್ ತಂದು ಕೊಡಿ ಎಂದು ಶಾಸಕರಲ್ಲಿ ಮನವಿ ಮಾಡಿದರು. ಇದರ ಜತೆಗೆ ಮೂಲ್ಕಿ ಮೂಡಬಿದ್ರೆ ಶಾಸಕ ಉಮಾನಾಥ ಕೋಟ್ಯಾನ್ ಅವರ ಸಹಕಾರದಲ್ಲಿ, ಸ್ವತಃ ವೈದ್ಯರಾಗಿರುವ ಡಾ.ಭರತ್ ಶೆಟ್ಟಿ ಅವರು ಕ್ಯಾನ್ಸರ್ ಮೆಡಿಸಿನ್’ನ ಮಹತ್ವ ಅರಿತು ಮುಂಬೈಯಿಂದ ಆ ಔಷಧಿಯನ್ನು ಮಂಗಳೂರಿಗೆ ತರಿಸಿದರು.
ಲಾಕ್’ಡೌನ್, ಸೀಲ್’ಡೌನ್ ಪರಿಸ್ಥಿತಿ ಇರುವುದರಿಂದ ಮುಂಬೈ-ಮಂಗಳೂರು ನಡುವೆ ಸಂಪರ್ಕ ಸ್ತಬ್ಧವಾಗಿದೆ. ಹಾಗಾಗಿ ಆ ಕ್ಯಾನ್ಸರ್ ಕಾಯಿಲೆಯ ಔಷಧಿಯನ್ನು ಮುಂಬಯಿಯಿಂದ ಬೆಂಗಳೂರಿಗೆ ತರಿಸಿ, ಅಲ್ಲಿಂದ ಮಂಗಳೂರಿಗೆ ತರಿಸುವ ಪ್ರಯತ್ನ ನಡೆಯಿತು. ಅಂತೂ ಇಂತೂ ಈ ಔಷಧಿ ಸೀಲ್’ಡೌನ್ ಪ್ರದೇಶಕ್ಕೆ ಬಂದು ಮುಟ್ಟಿತ್ತು. ಇದನ್ನು ಶಾಸಕರು ಬಿಜೆಪಿ ಮುಖಂಡರಾದ ತಿಲಕ್ ರಾಜ್ ಕೃಷ್ಣಾಪುರ, ದಿನಕರ್ ಇಡ್ಯಾ, ರಾಘವೇಂದ್ರ ಶೆಣೈ, ಸುನಿಲ್ ಮೊದಲಾದ ಸ್ವಯಂಸೇವಕರ ಮೂಲಕ ಮಂಗಳೂರು ಹೊರವಲಯದ ಹಳೆಯಂಗಡಿ ಸಮೀಪದಲ್ಲಿರುವ ಇಂದಿರಾ ನಗರದ ಫಲಾನುಭವಿಗೆ ಮುಟ್ಟಿಸಿದರು.
ಜೀವ ಉಳಿಸಲು ಅಗತ್ಯವಿದ್ದ ಮೆಡಿಸಿನ್ ಸಕಾಲದಲ್ಲಿ ತಲುಪಿದ್ದರಿಂದ ಮಹಿಳೆ ಕುಟುಂಬಸ್ಥರು ನಿರಾಳರಾದರು. ಔಷಧಿ ತರಿಸಿಕೊಟ್ಟಿದ್ದಷ್ಟೇ ಅಲ್ಲ ಈ ಬಡಪಾಯಿ ಕುಟುಂಬಕ್ಕೆ ಔಷದೋಪಚಾರ ಸಂಬಂಧ ಶಾಸಕರು ಹಣಕಾಸಿನ ನೆರವನ್ನೂ ನೀಡಿ ಮಾನವೀಯತೆ ಮೆರೆದಿದ್ದಾರೆ. ವೈದ್ಯ ಶಾಸಕರ ಈ ಮಾನವೀಯ ಕೆಲಸದ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಜನ ಮೆಚ್ಚುಗೆ ವ್ಯಕ್ತಪಡುತ್ತಿದ್ದಾರೆ.
ಇದನ್ನೂ ಓದಿ.. ಲಾಕ್’ಡೌನ್ ಅವಾಂತರ; ಮೋದಿಗೆ ಸೆಡ್ಡು ಹೊಡೆದ್ರಾ ನಾರಾಯಣ ಮೂರ್ತಿ