ಡೆಡ್ಲಿ ಕೊರೊನ ಮದ್ಯೆ ಮರಿ ಜಿರಾಫೆ ದತ್ತು; ವಿಂಗ್ ಕಮಾಂಡರ್ ಜಿ.ಬಿ. ಅತ್ರಿಗೆ ಸೆಲ್ಯೂಟ್

ಬೆಂಗಳೂರು: ನಿವೃತ್ತ ಸೇನಾನಿ, ಸಾಮಾಜಿಕ ಹೋರಾಟಗಾರ ವಿಂಗ್ ಕಮಾಂಡರ್ ಜಿ.ಬಿ. ಅತ್ರಿ ಪ್ರಾಣಿಪ್ರಿಯರ ಸಂತಸಕ್ಕೆ ಕಾರಣರಾಗಿದ್ದಾರೆ. ಕರ್ನಾಟಕದಲ್ಲೇ ಮೊದಲ ಬಾರಿ ಜಿರಾಫೆ ದತ್ತು ತೆಗೆದುಕೊಂಡ ಹೆಗ್ಗಳಿಕೆ ಗೆ ಅವರು ಪಾತ್ರರಾಗಿದ್ದಾರೆ.

ಕೊರೊನ ಮಹಾಮಾರಿ ತಂದೊಡ್ಡಿರುವ ಸಂಕಷ್ಟದ ಸಂಕೋಲೆಯಲ್ಲಿ ಜನಸಾಮಾನ್ಯರು ಸಿಲುಕಿದ್ದು ಅದರ ಪರಿಣಾಮವಾಗಿ ಉದ್ಯಾನವನಗಳಲ್ಲಿನ ಮೂಕ ಪ್ರಾಣಿಗಳ ಬದುಕೂ ತತ್ತರಿಸಿದೆ. ಪರಿಸ್ಥಿತಿಯ ಬಲವಾದ ಹೊಡೆತಕ್ಕೊಳಗಾಗಿರುವ ಈ ಪ್ರಾಣಿಗಳ ಮೂಕ ವೇದನೆ ಯಾರಿಗೂ ಕೇಳಿಸುತ್ತಿಲ್ಲ. ಬನ್ನೇರುಘಟ್ಟ ಸಹಿತ ದೇಶದ ಪ್ರಮುಖ ಜೂಗಳ ಸ್ಥಿತಿ ಚಿಂತಾಜನಕವಾಗಿದೆ. ಇಂತಹಾ ಸಂದರ್ಭದಲ್ಲಿ ವಾಯುಪಡೆಯ ನಿವೃತ್ತ ಸೇನಾನಿ ಜಿ.ಬಿ.ಅತ್ರಿಯವರು ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನದ ಜಿರಾಫೆ ಮರಿಯನ್ನು ದತ್ತು ಪಡೆದು ಪ್ರಾಣಿಪ್ರಿಯರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

ವಿಂಗ್ ಕಮಾಂಡರ್ ಜಿ.ಬಿ.ಅತ್ರಿ ತನ್ನ ನಿವೃತ್ತಿ ನಂತರ ಸಾಮಾಜಿಕ ಕಳಕಳಿ ವಿಚಾರ ಹಾಗೂ ಸಾಮಾಜಿಕ ಹೋರಾಟ ಮೂಲಕ ಜನಸ್ನೇಹಿ ಬದುಕಿನತ್ತ ಒಲವು ತೋರಿದವರು. ಆರ್ಟಿಐ ಕಾರ್ಯಕರ್ತರಿಗೆ ಮಾರ್ಗದರ್ಶನ ನೀಡುತ್ತಾ ಹಲವಾರು ಹೋರಾಟಗಾರರನ್ನು ರೂಪಿಸಿರುವ ಈ ಸೇನಾನಿಯು ಭ್ರಷ್ಟರ ಪಾಲಿಗೆ ಸಿಂಹಸ್ವಪ್ನ. ಅಷ್ಟೇ ಅಲ್ಲ ನೈಸರ್ಗಿಕ ಸಂಪನ್ಮೂಲಗಳ ಅಭಿವೃದ್ಧಿ ಹಾಗೂ ಸಂರಕ್ಷಣೆ ಮಾಡಿ ಸಮಾಜಕ್ಕೆ ಅಪಾರ ಕೊಡುಗೆ ನೀಡಿದ್ದಾರೆ. ತನ್ನ ಪಕೃತಿ ರಕ್ಷಣೆಯ ಕಾರ್ಯದಿಂದ ಬಹುಕೋಟಿ ಕಂಪನಿಗಳ ವಿರುದ್ಧ ಯುದ್ದನೇ ಮಾಡಿದ್ದಾರೆ.

ಇದೀಗ ಪ್ರಕೃತಿ ಪ್ರೇಮಿಯಾಗಿ ಅವರು ತಮ್ಮ ಈ ಯಜ್ಞವನ್ನು ಮುಂದುವರಿಸಿದ್ದು, ಬೆಂಗಳೂರಿನ ಬನ್ನೇರುಘಟ್ಟದಲ್ಲಿನ ೧೮ ತಿಂಗಳ ಜಿರಾಫೆ ಮರಿಯನ್ನು ದತ್ತು ಪಡೆದು ಗಮನಸೆಳೆದಿದ್ದಾರೆ. ಈ ಮೂಲಕ ಕಾಡು ಪ್ರಾಣಿಗಳ ಬಗ್ಗೆ ತಮ್ಮ ಕಾಳಜಿ ವ್ಯಕ್ತಪಡಿಸಿದ್ದಾರೆ. ಈ ನಿವೃತ್ತ ಯೋಧ ದತ್ತು ಪಡೆದ ಜಿರಾಫೆ ಮರಿಗೆ ‘ಯದುನಂದನ್’ ಎಂದು ಹೆಸರಿಡಲಾಗಿದೆ.

 

Related posts