ಪೊಲೀಸರಿಗೆ ರಾಜ್ಯ ಸರ್ಕಾರದ ಬಂಪರ್

ಬೆಂಗಳೂರು: ರಾಜ್ಯ ಬಜೆಟ್ ನಲ್ಲಿ ಈ ಬಾರಿ ಪೊಲೀಸರಿಗೂ ಬಂಪರ್ ಕೊಡುಗೆ ಸಿಕ್ಕಿದೆ. ಪೊಲೀಸ್ ಸಿಬ್ಬಂದಿಗೆ ಮನೆಗಳನ್ನು ನಿರ್ಮಿಸಿಕೊಡಲು ಈ ಸರ್ಕಾರ “ಪೊಲೀಸ್ ಗೃಹ ಭಾಗ್ಯ-2020” ಯೋಜನೆಯನ್ನು ಪ್ರಕಟಿಸಿದೆ.

ಬಜೆಟ್ ಭಾಷಣದಲ್ಲಿ ಈ ಯೋಜನೆ ಪ್ರಕಟಿಸಿದ ಮುಖ್ಯಮಂತ್ರಿ ಬಿ.ಎಸ್.ಯಡಿಯೂಪ್ಪ, ಮುಂದಿನ ಹಣಕಾಸು ವರ್ಷದಲ್ಲಿ ಯೋಜನೆಯ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗುವುದು ಎಂದು ತಿಳಿಸಿದರು. ಇದಕ್ಕಾಗಿ 200 ಕೋಟಿ ರೂ. ಒದಗಿಸಲಾಗುವುದು ಎಂದಿದ್ದಾರೆ.

ಮಹಿಳೆಯರಿಗೆ ಸುರಕ್ಷತೆ ಒದಗಿಸುವ ‘ಸುರಕ್ಷಾ ಆ್ಯಪ್’ಗೆ ರಾಜಧಾನಿ ಬೆಂಗಳೂರಿನ 2 ಲಕ್ಷಕ್ಕೂ ಹೆಚ್ಚು ಜನರಿಂದ ಮೆಚ್ಚುಗೆ ಸಿಕ್ಕಿದೆ. ಈ ಆ್ಯಪ್ ಅನ್ನು ರಾಜ್ಯಾದ್ಯಂತ ವಿಸ್ತರಿಸಲಾಗುವುದು ಎಂದಿದ್ದಾರೆ. ಇದರ ಜೊತೆಗೆ ಬೆಂಗಳೂರಿನಲ್ಲಿ ಮಹಿಳಾ ಸುರಕ್ಷತೆಗೆ ‘ಪಿಂಕ್ ಹೊಯ್ಸಳ’ ಕಾರ್ಯಕ್ರಮದಡಿ 75 ಹೊಯ್ಸಳ ವಾಹನಗಳನ್ನು ಖರೀದಿಸಲಾಗುವುದು ಎಂದು ಅವರು ಪ್ರಕಟಿಸಿದ್ದಾರೆ.

ಬೆಂಗಳೂರು ನಗರದ ವೈಟ್‍ಫೀಲ್ಡ್ ನಲ್ಲಿ ಹೊಸದಾಗಿ ಸಂಚಾರ ಉಪ ವಿಭಾಗ ಸ್ಥಾಪಿಸಲಾಗುವುದು. ದೇವನಹಳ್ಳಿ, ಕುಣಿಗಲ್, ಮುಧೋಳ, ನರಸಿಂಹರಾಜಪುರ, ಯಲಬುರ್ಗಾ, ತೀರ್ಥಹಳ್ಳಿ, ಗೋಣಿಕೊಪ್ಪ, ಬೈಂದೂರು, ಮುಂಡಗೋಡ ಮತ್ತು ಶಿರಹಟ್ಟಿಯಲ್ಲಿ 10 ಹೊಸ ಅಗ್ನಿಶಾಮಕ ಠಾಣೆ ಸ್ಥಾಪಿಸಲಾಗುವುದು. ಪೊಲೀಸ್ ಶ್ವಾನದಳದ ಬಲವರ್ಧನೆಗೆ 2.5 ಕೋಟಿ ರೂ. ಅನುದಾನನೀಡಲಾಗುವುದು. ಮೀಸಲು, ಪೊಲೀಸ್ ತರಬೇತಿ ಶಾಲೆಗಳಲ್ಲಿ ಹಾಗೂ ಸಿ.ಎ.ಆರ್., ಡಿ.ಎ.ಆರ್. ಕೇಂದ್ರ ಸ್ಥಾನಗಳಲ್ಲಿ ರಿಯಾಯಿತಿ ದರದಲ್ಲಿ ಮಹಿಳೆಯರಿಗೆ ಸ್ವಯಂ ರಕ್ಷಣೆ ತರಬೇತಿ ನೀಡಲಾಗುವುದು ಎಂದೂ ಸಿಎಂ ಪ್ರಕಟಿಸುವ ಮೂಲಕ ರಾಜ್ಯ ಪೊಲೀಸರಿಗೆ ಹಲವು ಕೊಡುಗೆ ನೀಡಿದ್ದಾರೆ ಎಂದು ಪೊಲೀಸ್ ಸಿಬ್ಬಂದಿ ಸಂತಸ ಹಂಚಿಕೊಂಡಿದ್ದಾರೆ.

Related posts