ಕೊರೋನಾ ಬೇಧಿಸಲು ಚಕ್ರವ್ಯೂಹ; ದಿಗ್ಬಂಧನ ಕ್ರಮ

ಬೆಂಗಳೂರು: ಕೊರೋನಾ ಸೋಂಕಿತರ ಸಂಖ್ಯೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಕಠಿಣ ನಿಲುವು ತಾಳಿದೆ. ದಿಢೀರನೆ ಹೊಸ ನಿಯಮ ಘೋಷಿಸಿರುವ ಸರ್ಕಾರ ಲಾಕ್ ಡೌನ್ ಜಾರಿಯಿದ್ದರೂ ಹೊಸ ನಿರ್ಬಂಧದ ಕ್ರಮಗಳನ್ನು ಅನುಸರಿಸಲು ಅಧಿಕಾರಿಗಳಿಗೆ ಸೂಚಿಸಿದೆ.

ಶುಕ್ರವಾರ ಹಠಾತ್ತನೆ ೩೮ ಕೋವಿಡ್-೧೯ ಸೋಂಕು ಪ್ರಕರಣಗಳು ದೃಢಪಟ್ಟಿತು. ಹೀಗೆ ಹೆಚ್ಚುತ್ತಲೇ ಇರುವ ವೈರಾಣು ಹಾವಳಿಗೆ ಅಂಕುಶ ಹಾಕಲು ವಿವಿಧ ವಲಯಗಳನ್ನು ಘೋಷಿಸಿ ಕಾರ್ಯಾಚರಣೆಗಿಳಿಯಲು ಸರ್ಕಾರ ಮುಂದಾಗಿದೆ. ನಿಯಂತ್ರಿತ ವಲಯ, ಬಫರ್ ಝೋನ್ ಹಾಗೂ ವಲಯ ಎಂದು ವಿಂಗಡಿಸಿ ಕಣ್ಗಾವಲು ಮುಂದಾಗಿದೆ.

ನಿಯಂತ್ರಿತ ವಲಯ ಎಂದು ಗುರುತಿಸಲಾದ ಪ್ರದೇಶದಲ್ಲಿ ಸೋಂಕಿತ ವ್ಯಕ್ತಿಯ ನಿವಾಸದ ಮನೆ ಸುತ್ತಮುತ್ತ ದಿಗ್ಬಂಧನ ಹಾಕಲಾಗುವುದು. ಹಳ್ಳಿ ಅಥವಾ ಪ್ರದೇಶಗಳ ರಸ್ತೆಗಳನ್ನೂ ಬಂದ್ ಮಾಡಿ ಸೀಲ್’ಡೌನ್ ಮಾಡಲು ಸೂಚಿಸಲಾಗಿದೆ. ದೀನಸಿ, ಸಿಲಿಂಡರ್, ಔಷಧಿಗೆ ಮಾತ್ರ ಮನೆಯಿಂದ ಹೊರಬರಬಹುದು. ವಾಹನಗಳು ಒಳಬರುವಂತಿಲ್ಲ. ಹೊರ ಹೋಗಲೂ ಅವಕಾಶ ಇರುವುದಿಲ್ಲ.

ಬಫರ್ ಝೋನ್ ಗಳಲ್ಲಿ ನಿರ್ದಿಷ್ಟ ನಗರ ಪ್ರದೇಶದ ಸುತ್ತ ೫ ಕಿಲೋ ಮೀಟರ್ ಹಾಗೂ ಗ್ರಾಮೀಣ ಪ್ರದೇಶವಾಗಿದ್ದರೆ ೭ ಕಿಲೋ ಮೀಟರ್ ವ್ಯಾಪ್ತಿಯಲ್ಲಿ ನಿಗಾ ವಹಿಸಲಾಗುತ್ತದೆ.

ಬಿಬಿಎಂಪಿ ಸಹಿತ ವಲಯ ವ್ಯಾಪ್ತಿಗಳಲ್ಲಿ ಲಾಕ್ ಡೌನ್ ಪರಿಪೂರ್ಣ ಜಾರಿ ಸಂಬಂಧ ಕಟ್ಟುನಿಟ್ಟಿನ ಕ್ರಮ ಅನುಸರಿಸಲಾಗುತ್ತದೆ. ಬಿಬಿಎಂಪಿ ತಂಡ, ಪೊಲೀಸರು ಹಾಗೂ ಅರೋಗ್ಯ ಇಲಾಖೆ ಸಿಬ್ಬಂದಿ ಪ್ರತ್ಯೇಕ ತಂಡಗಳನ್ನು ರಚಿಸಿ ಕೆಲಸ ಮಾಡುತ್ತಾರೆ. ಹಾಗಾಗಿ ವಾಹನ ಸಂಚಾರ ನಿರ್ಬಂಧ ಆದೇಶ ಜಾರಿ ಸಂಬಂಧ ಪೊಲೀಸರು ನಿಷ್ಠುರ ಕ್ರಮಗಳನ್ನು ಅನುಸರಿಸಲಿದ್ದಾರೆ.

Related posts