ಕೊರೋನಾ ಸಂಕಷ್ಟ; ಕೇಂದ್ರದ ನಿರ್ಧಾರದಿಂದ ತೆರಿಗೆದಾರರು ನಿರಾಳ

ದೆಹಲಿ: ವಿಶ್ವದಾದ್ಯಂತ 15 ಸಾವಿರಕ್ಕೂ ಹೆಚ್ಚು ಮಂದಿಯ ಮರಣಕ್ಕೆ ಕಾರಣವಾಗಿರುವ ಕೊರೋನಾ ಸೋಂಕು ಭಾರತದಲ್ಲೂ ತಲ್ಲಣ ಸೃಷ್ಟಿಸಿದೆ. ಈ ಹಿನ್ನೆಲೆಯಲ್ಲಿ ಸೋಂಕು ಹರಡುವುದನ್ನು ತಡೆಯಲು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಇನ್ನಿಲ್ಲದ ಕಸರತ್ತಿನಲ್ಲಿ ತೊಡಗಿವೆ.

ಈ ನಡುವೆ ದೇಶವ್ಯಾಪಿ ಲಾಕ್ ಡೌನ್ ಆದೇಶ ಜಾರಿಯಾಗಿರುವುದರಿಂದಾಗಿ ವರ್ತಕ ಸಮುದಾಯವೂ ಕಂಗಾಲಾಗಿದೆ. ದೇಶದ ಆರ್ಥಿಕತೆಗೂ ಕೊರೋನಾ ಬಲವಾದ ಹೊಡೆತ ನೀಡಿದೆ. ಈ ಸಂಕಷ್ಟ ಕಾಲದಲ್ಲಿ ದೇಶದ ಜನರ ನೆರವಿಗೆ ಧಾವಿಸಿರುವ ಕೇಂದ್ರ ಸರ್ಕಾರ ಆದಾಯ ತೆರಿಗೆ ಪಾವತಿದಾರರನ್ನು ನಿರಾಳವಾಗಿಸಿದೆ. ಈ ಸಂಬಂಧ ಪ್ರಮುಖ ನಿರ್ದಾರಗಳನ್ನು ಪ್ರಕಟಿಸಿರುವ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್​, ಆದಾಯ ತೆರಿಗೆ ಪಾವತಿಗೆ ಇದ್ದ ಗಡುವನ್ನು ಜೂನ್ 30ವರೆಗೆ ವಿಸ್ತರಿಸಿದ್ದಾರೆ.

ದೆಹಲಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು, 2018-19ರ ವಿತ್ತೀಯ ವರ್ಷದ ಐಟಿ ರಿಟರ್ನ್ಸ್ ಮಾರ್ಚ್​ ಅಂತ್ಯಕ್ಕೆ ಸಲ್ಲಿಸಬೇಕಿತ್ತು. ಇದೀಗ ಈ ಅಂತಿಮ ದಿನವನ್ನು ಜೂನ್ 30ರವರೆಗೆ ವಿಸ್ತರಣೆ ಮಾಡಲಾಗಿದೆ ಎಂದು ವಿವರಿಸಿದರು. ಪಾವತಿ ವಿಳಂಬವಾದಲ್ಲಿ ಶೇಕಡಾ 9 ಬಡ್ಡಿ ಪಾವತಿಸಬೇಕಿತ್ತು. ಆ ಶುಲ್ಕ ಕಟ್ಟಬೇಕಿಲ್ಲ. ಅಷ್ಟೇ ಅಲ್ಲ, ಆಧಾರ್-ಪಾನ್ ಲಿಂಕಿಂಗ್ ಅವಧಿಯನ್ನೂ ಜೂನ್ 30ಕ್ಕೆ ವಿಸ್ತರಣೆ ಮಾಡಲಾಗಿದೆ ಎಂದು ಸಚಿವೆ ನಿರ್ಮಲಾ ಸೀತಾರಾಮನ್ ತಿಳಿಸಿದ್ದಾರೆ.

ಕೇಂದ್ರ ಸರ್ಕಾರ ಪ್ರಕಟಿಸಿರುವ ನಿರ್ಧಾರದ ಹೈಲೈಟ್ಸ್​ ಹೀಗಿದೆ :

 • ಆದಾಯ ತೆರಿಗೆ ಪಾವತಿಗೆ ಜೂನ್ 30ವರೆಗೆ ಅವಕಾಶ
 • ಐಟಿ ರಿಟರ್ನ್ಸ್ ಸಲ್ಲಿಕೆ ಜೂನ್ 30ರವರೆಗೆ ವಿಸ್ತರಣೆ
 • 2018-19ರ ವಿತ್ತೀಯ ವರ್ಷದ ಐಟಿ ರಿಟರ್ನ್ಸ್ ಮಾರ್ಚ್​ ಅಂತ್ಯಕ್ಕೆ ಸಲ್ಲಿಸಬೇಕಿತ್ತು. ಇದೀಗ ಹೆಚ್ಚಿನ ಸಮಯ ನೀಡಿದ ಇಲಾಖೆ
 • ವಿಳಂಬ ಪಾವತಿಯ ಬಡ್ಡಿ ದರದಲ್ಲೂ ಇಳಿಕೆ
 • ದಂಡ ಪಾವತಿ ಬಡ್ಡಿ ಶೇ.12ರಿಂದ ಶೇ.9ಕ್ಕೆ ಇಳಿಕೆ
 • ಜೂ.30ರವರೆಗೆ ಹೆಚ್ಚುವರಿ ಶುಲ್ಕ ಪಾವತಿಯಿಲ್ಲ
 • ಆಧಾರ್-ಪಾನ್ ಲಿಂಕಿಂಗ್ ಅವಧಿ ಜೂನ್ 30ಕ್ಕೆ ವಿಸ್ತರಣೆ
 • ಸಬ್ ಕಾ ವಿಶ್ವಾಸ್ ಯೋಜನೆಯೂ ವಿಸ್ತರಣೆ
 • ಜೂ.30ವರೆಗೆ ವಿವಾದ್ ಸೆ ವಿಶ್ವಾಸ್ ಸ್ಕೀಂ ವಿಸ್ತರಣೆ
 • ಜಿಎಸ್ಟಿ ರಿಟರ್ನ್ಸ್ ಸಲ್ಲಿಕೆ ಅವಧಿಯೂ ಜೂನ್ 30ರವರೆಗೆ ವಿಸ್ತರಣೆ
 • ಮಾರ್ಚ್, ಏಪ್ರಿಲ್, ಮೇ ಜಿಎಸ್​ಟಿ ಪಾವತಿ ವಿಳಂಬಕ್ಕೆ ದಂಡವಿಲ್ಲ
 • 5 ಕೋಟಿ ರೂ. ಒಳಗಿನ ಜಿಎಸ್​ಟಿಗೆ ದಂಡ ಇಲ್ಲ

Related posts