ಕೊರೋನಾ ಮರಣ ತಪ್ಪಿಸಲು ಮೋದಿ ಸೂತ್ರ; ಏಪ್ರಿಲ್ 14ರವರೆಗೆ ಭಾರತ ಲಾಕ್ ಡೌನ್

ದೆಹಲಿ: ಕೊರೋನಾ ರುದ್ರ ನರ್ತನದಿಂದ ದೇಶವನ್ನು ಪಾರು ಮಾಡಲು ಸಮರಸಜ್ಜಿನಲ್ಲಿ ಕಾರ್ಯಾಚರಣೆ ಸಾಗಿದೆ. ಜನತಾ ಕರ್ಫ್ಯೂ ಸಹಿತ ನಿಷ್ಠುರ ನಿರ್ಧಾರಗಳನ್ನು ಕೈಗೊಂಡಿದ್ದ ಪ್ರಧಾನಿ ನರೇಂದ್ರ ಮೋದಿ ಇದೀಗ 21 ದಿನಗಳ ಭಾರತ ಲಾಕ್ ಡೌನ್’ಗೆ ಕರೆ ನೀಡಿದ್ದಾರೆ.

ಕೊರೋನಾ ಸೋಂಕು ಮರಣ ಮೃದಂಗ ಭಾರಿಸಲು ಆರಂಭಿಸಿದ ನಂತರ ಎರಡನೇ ಬಾರಿಗೆ ಮಂಗಳವಾರ ರಾತ್ರಿ ದೇಶದ ಜನರನ್ನುದ್ದೇಶಿಸಿ ಮಾತನಾಡಿದ ನರೇಂದ್ರ ಮೋದಿ ಇಡೀ ಜಗತ್ತಿನ ಕುತೂಹಲದ ಕೇಂದ್ರಬಿಂದುವಾದರು. ಭಾನುವಾರದ ಜನತಾ ಕರ್ಫ್ಯೂ ರೀತಿಯ ನಿರ್ಧಾರವೊಂದು ಅನಿವಾರ್ಯವಾಗಿದೆ ಎಂದು ಸಾರಿದ ಅವರು, ಇಂದು ಮಧ್ಯರಾತ್ರಿಯಿಂದ ಏಪ್ರಿಲ್ ೧೪ರ ವರೆಗೆ, 21 ದಿನಗಳ ಕಾಲ ಇಡೀ ದೇಶವೇ ಲಾಕ್​​ಡೌನ್​​ ಮಾಡಲಾಗುತ್ತದೆ ಎಂದು ಘೋಷಿಸಿದರು.

ಕೋವಿಡ್-19 ವೈರಾಣು ಹರಡುವುದನ್ನು ತಡೆಯಲು ನಾವು ಸಾಮಾಜಿಕ ಅಂತರ ಕಾಯ್ದುಕೊಳ್ಳುವುದೊಂದೇ ನಮಗಿರುವ ಮಾರ್ಗ ಎಂದ ಅವರು, ಕೊರೋನಾ ನಿಯಂತ್ರಣ ಸಂಬಂಧ 15 ಸಾವಿರ ಕೋಟಿ ರೂಪಾಯಿ ಘೋಷಣೆ ಮಾಡಿದರು.

ಮುಂದಿನ 21 ದಿನ ಲಾಕ್ ಡೌನ್ ಮಾಡದೆ ಇದ್ದಲ್ಲಿ ಭಾರತವು 21 ವರ್ಷಗಳಷ್ಟು ಹಿಂದಕ್ಕೆ ಹೋಗಬೇಕಾಗುತ್ತದೆ ಹೇಳುವ ಮೂಲಕ ನರೇಂದ್ರ ಮೋದಿಯವರು ಪರಿಸ್ಥಿತಿಯತ್ತ ಬೊಟ್ಟು ಮಾಡಿದ ವೈಖರಿಯೂ ದೇಶದ ಜನರ ಮನಮುಟ್ಟುವ ರೀತಿಯಲ್ಲಿತ್ತು.

Related posts