ಬೆಂಗಳೂರು: ಕಳೆದೆರಡು ದಿನಗಳಿಂದೀಚೆಗೆ ದೇಶಾದ್ಯಂತ ಕೊರೋನಾ ಸೋಂಕಿತರ ಸಂಖ್ಯೆ ಹೆಚ್ಚುತ್ತಲೇ ಇದ್ದು ಭೀತಿ ದುಪ್ಪಟ್ಟಾಗಿದೆ. ಲಾಕ್ ಡೌನ್ ಜಾರಿಯಲ್ಲಿದ್ದರೂ ಕೂಡಾ ಕರ್ನಾಟಕ ಇನ್ನೂ ಸೇಫ್ ಎಂಬುದು ದೃಢ ಪಟ್ಟಿಲ್ಲ. ಬೆಂಗಳೂರು, ಮೈಸೂರು, ಮಂಗಳೂರು ಮೊದಲಾದೆಡೆ ಸೋಂಕು ಹರಡುವ ಭೀತಿ ಇನ್ನೂ ಕೂಡಾ ಕಾಡುತ್ತಿದೆ. ಹಾಗಾಗಿ ರಾಜ್ಯ ಸರ್ಕಾರ 4 ಜಿಲ್ಲೆಗಳನ್ನು ರೆಡ್ ಝೋನ್ ಎಂದು ಗುರುತಿಸಿ ಹೈ ಅಲರ್ಟ್ ಘೋಷಿಸಿದೆ.
ದೇಶದ ಪ್ರಮುಖ ನಗರಗಳ ಪೈಕಿ ಕೊರೋನಾ ಹಾಟ್ ಸ್ಪಾಟ್ ಪಟ್ಟಿಯನ್ನು ಈಗಾಗಲೇ ಬಿಡುಗಡೆ ಮಾಡಲಾಗಿತ್ತು. ಅದರ ಜೊತೆಯಲ್ಲಿ ಇದೀಗ ಕರ್ನಾಟಕದಲ್ಲಿ ಐದು ಪ್ರಮುಖ ರೆಡ್ ಝೋನ್ ಜಿಲ್ಲೆಗಳನ್ನು ಬೊಟ್ಟು ಮಾಡಲಾಗಿದೆ. ಸಿಲಿಕಾನ್ ಸಿಟಿಯನ್ನು ರಾಷ್ಟ್ರೀಯ ರೋಗ ನಿಯಂತ್ರಣ ಕೇಂದ್ರ ಕೊರೋನಾ ಹಾಟ್’ಸ್ಪಾಟ್ ಎಂದು ಈಗಾಗಲೇ ಘೋಷಣೆ ಮಾಡಿದೆ. ಇದರ ಜೊತೆಯಲ್ಲೇ ರಾಜ್ಯ ಸರ್ಕಾರ ರಾಜ್ಯದ ನಾಲ್ಕು ಜಿಲ್ಲೆಗಳನ್ನು ರೆಡ್ ಝೋನ್ ಎಂದು ಘೋಷಣೆ ಮಾಡಿದ್ದು ಇದರಲ್ಲೂ ಬೆಂಗಳೂರು ಸುರಕ್ಷಿತವಲ್ಲ ಎಂಬುದನ್ನು ಸಾರಿಹೇಳಿದೆ.
ರಾಜ್ಯದಲ್ಲಿನ ರೆಡ್ ಝೋನ್ ಜಿಲ್ಲೆಗಳು
- ಮೈಸೂರು,
- ಉತ್ತರ ಕನ್ನಡ,
- ಬೆಂಗಳೂರು,
- ದಕ್ಷಿಣ ಕನ್ನಡ
- ಚಿಕ್ಕಬಳ್ಳಾಪುರ
ಮೈಸೂರು, ಉತ್ತರ ಕನ್ನಡ, ಬೆಂಗಳೂರು, ದಕ್ಷಿಣ ಕನ್ನಡ ಹಾಗೂ ಚಿಕ್ಕಬಳ್ಳಾಪುರಗಳನ್ನು ರಾಜ್ಯ ಸರ್ಕಾರ ರೆಡ್ ಝೋನ್ ಎಂದು ಘೋಷಣೆ ಮಾಡಿದೆ.
ಈ ಬಗ್ಗೆ ಮಾಹಿತಿ ಹಂಚಿಕೊಂಡಿರುವ ವೈದ್ಯಕೀಯ ಶಿಕ್ಷಣ ಸಚಿವ ಕೆ. ಸುಧಾಕರ್, ಬೆಂಗಳೂರು ಸೇರಿ ನಾಲ್ಕು ಜಿಲ್ಲೆಗಳಲ್ಲಿ ಕಠಿಣ ಕ್ರಮಗಳನ್ನು ಕೈಗೊಂಡಿದೆ. ಐಟಿ ಕ್ಷೇತ್ರದಲ್ಲಿರುವ ಬೆಂಗಳೂರಿನಲ್ಲಿ ಹೆಚ್ಚಿನ ಕಾಳಜಿ ವಹಿಸುವ ಅಗತ್ಯವಿದ್ದು ಮುಂದಿನ ದಿನಗಳಲ್ಲಿ ಈ ಕ್ರಮ ಮತ್ತಷ್ಟು ಬಿಗಿಗೊಳ್ಳಲಿದೆ ಎಂದು ತಿಳಿಸಿದ್ದಾರೆ.
ಈ ನಡುವೆ, ಈ ರೆಡ್ ಝೋನ್ ಸುತ್ತಮುತ್ತಲ ಪ್ರದೇಶಗಳನ್ನು ಬಫರ್ ಝೋನ್ ಎಂದೂ ಗುರುತಿಸಿ ತೀವ್ರ ಕಟ್ಟೆಚ್ಚರ ವಹಿಸಲಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.