ಗೋಶಾಲೆಗಳಿಗೂ ಲಾಕ್ ಡೌನ್ ಬಿಸಿ; ಹಸುಗಳ ಮೊರೆಗೆ ಕಿವಿಯಾದ ಸಚಿವ ಕೋಟ

ಮಂಗಳೂರು: ಕೊರೊನಾ ಕಾರಣಕ್ಕಾಗಿ ಲಾಕ್’ಡೌನ್ ಜಾರಿಯಲ್ಲಿರುವುದರಿಂದ ಪ್ರಸ್ತುತ ಪರಿಸ್ಥಿತಿಯು ಮನುಷ್ಯರಿಗಷ್ಟೇ ಅಲ್ಲ ಸಕಲ ಜೀವಿರಾಶಿಗಳೂ ಆತಂಕದ ಸ್ಥಿತಿ. ಈ ಸಂಕಟದ ಸಮಯದಲ್ಲಿ ಅವುಗಳ ಮೌನ ಸಂವೇದನೆಗಳಿಗೂ ಸ್ಪಂದಿಸುವ ಅಗತ್ಯವಿದೆ.

ರಾಜ್ಯದ ಪ್ರತೀ ಜಿಲ್ಲೆಗಳಲ್ಲಿ ಸಮಾಜದ ನೆರವಿನೊಂದಿಗೆ ನಡೆಸಲ್ಪಡುವ ಅನೇಕ ಗೋಶಾಲೆಗಳಿಗೂ ಕೊರೊನಾ ಲಾಕ್’ಡೌನ್ ಬಿಸಿ ತಟ್ಟಿದೆ . ಮೇವಿಗೆ ಕೊರತೆ ಎದುರಾಗಿದೆ. ಈ ಪರಿಸ್ಥಿತಿಯಲ್ಲಿ ದಾನಿಗಳೂ ಕಡಿಮೆಯಾಗಿದ್ದಾರೆ .‌ ಈ ಬಗ್ಗೆ ಗೋಶಾಲೆಗಳ ಸಮಸ್ಯೆಗಳ ಸೂಕ್ಷ್ಮತೆ ಅರಿತ ರಾಜ್ಯದ ಧಾರ್ಮಿಕ ದತ್ತಿ ಮುಜರಾಯಿ ಮಂತ್ರಿ‌ ಕೋಟ ಶ್ರೀನಿವಾಸ ಪೂಜಾರಿಯವರು ಗೋಶಾಲೆಗಳಿಗೂ ಭೇಟಿ ನೀಡಿ ಪರಿಸ್ಥಿತಿ ಅವಲೋಕಿಸಲು ಮುಂದಾಗಿದ್ದಾರೆ.
ಕರಾವಳಿಯ ನೀಲಾವರದ ಗೋಶಾಲೆಗೆ ಭೇಟಿ ನೀಡಿದ ಸಚಿವ ಕೋಟಾ ಶ್ರೀನಿವಾಸ ಪೂಜಾರಿ, ಗೋವುಗಳ ಮೂಕ ವೇದನೆ ಬಗ್ಗೆ ಮರುಗಿದರು.

ಗೋಶಾಲೆಯ ರೂವಾರಿ ಪೇಜಾವರ ಮಠಾಧೀಶ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದರೊಂದಿಗೆ ಸಮಾಲೋಚನೆ ನಡೆಸಿದ ಮುಜರಾಯಿ ಸಚಿವರು, ಗೋಶಾಲೆಗಳ ಸದ್ಯದ ಪರಿಸ್ಥಿತಿಯ ಮಾಹಿತಿ ಪಡೆದರು . ಈ ಸಂದರ್ಭ ಶ್ರೀಗಳು , ಕೇವಲ‌ ನೀಲಾವರ ಗೋಶಾಲೆ ಮಾತ್ರವಲ್ಲದೇ ರಾಜ್ಯದ ವಿವಿಧೆಡೆಗಳಲ್ಲಿರುವ ಅನೇಕ‌ ಗೋಶಾಲೆಗಳೂ ಸಮಸ್ಯೆಯಲ್ಲಿವೆ . ಇವುಗಳಿಗೂ ಸರಕಾರ ಸ್ಪಂದಿಸಿ ತುರ್ತು ನೆರವು ನೀಡಬೇಕೆಂದು ಮನವಿ ಮಾಡಿದರು.

ಶ್ರೀಗಳ ಮನವಿಗೆ ಸ್ಪಂದಿಸಿದ ಸಚಿವರು ಜಿಲ್ಲೆಯಲ್ಲಿ ಪೇಜಾವರ ಮಠದ ಮೂರು ಗೋಶಾಲೆಗಳು ಮತ್ತು ಸೋದೆ ಮಠದ ಅಧೀನದಲ್ಲಿರುವ ಹೂವಿನಕೆರೆ ಗೋಶಾಲೆಗಳಿಗೆ ಕೊರೊನಾ ಸವಾಲಿನ ತುರ್ತು ಆರ್ಥಿಕ ನೆರವು ಒದಗಿಸುವುದಾಗಿ ಹೇಳಿದರು. ಬೇರೆ ಜಿಲ್ಲೆಗಳ ಗೋಶಾಲೆಗಳ ಬಗ್ಗೆಯೂ ಗಮನಿಸುವುದಾಗಿ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಆಶ್ವಾಸನೆ ನೀಡಿದರು

Related posts