ಬೆಂಗಳೂರು: ಕನ್ನಡ ಚಿತ್ರರಂಗದ ಕ್ಯ್ಯಾಟ ನಟ ಬುಲೆಟ್ ಪ್ರಕಾಶ್ ಆರೋಗ್ಯ ಸ್ಥಿತಿ ಗಂಭೀರವಾಗಿದೆ. ಬಹು ಅಂಗಾಂಗ ವೈಫಲ್ಯದಿಂದ ಬಳಲುತ್ತಿದ್ದ ನಟ ಬುಲೆಟ್ ಪ್ರಕಾಶ್ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಸುದ್ದಿ ತಿಳಿಯುತ್ತಿದ್ದಂತೆಯೇ ಕನ್ನಡ ಚಿತ್ರರಂಗದ ಗಣ್ಯರು ಆಸ್ಪತ್ರೆಯತ್ತ ದೌಡಾಯಿಸಿದ್ದಾರೆ.
ಹಲವು ದಿನಗಳಿಂದ ಕಿಡ್ನಿ ಹಾಗೂ ಲಿವರ್ ಸಮಸ್ಯೆಯಿಂದ ಬಳಲುತ್ತಿದ್ದ ಹಾಸ್ಯ ನಟ ಬುಲೆಟ್ ಪ್ರಕಾಶ್ ಅವರು ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದರು. ಆರೋಗ್ಯ ಸ್ಥಿತಿ ಗಂಭೀರವಾಗಿದ್ದರಿಂದ ಅವರಿಗೆ ಕೃತಕ ಉಸಿರಾಟದ ವ್ಯವಸ್ಥೆ ಮಾಡಿ ಚಿಕಿತ್ಸೆ ನೀಡಲಾಗುತ್ತಿತ್ತು.
ಸಿನಿಮಾ ನಟನಾಗಿಯಷ್ಟೇ ಅಲ್ಲ, ಬಿಜೆಪಿಯಲ್ಲೂ ಗುರುತಿಸಿಕೊಂಡಿರುವ ಬುಲೆಟ್ ಪ್ರಕಾಶ್ ಅವರ ಆರೋಗ್ಯದಲ್ಲಿ ಕಳೆದೊಂದು ತಿಂಗಳಿನಿಂದ ಏರುಪೇರಾಗಿತ್ತು. ಆಸ್ಪತ್ರೆಗೆ ದಾಖಲಾದ ನಂತರವೂ ಕಿಡ್ನಿ ಹಾಗೂ ಲಿವರ್ ಸಮಸ್ಯೆಯಿಂದ ಅವರು ಚೇತರಿಸಿಕೊಳ್ಳಲಾಗಿಲ್ಲ. ವಿವಿಧ ಆಸ್ಪತ್ರೆಗಳಲ್ಲಿ ದಾಖಲಾಗಿದ್ದರೂ ಚೇತರಿಸಿಕೊಳ್ಳದ ಕಾರಣ ಶನಿವಾರ ಆಸ್ಪತ್ರೆಗೆ ಅವರನ್ನು ಸೇರಿಸಲಾಗಿತ್ತು.
ಆತಂಕ ಬೇಡ: ವೈದ್ಯರ ಸ್ಪಷ್ಟನೆ:
ಇದೇ ವೇಳೆ ನಟ ಬುಲೆಟ್ ಪ್ರಕಾಶ್ ಅವರಿಗೆ ಸೂಕ್ತ ಚಿಕಿತ್ಸೆ ನೀಡಲಾಗುತ್ತಿದೆ. ಅವರ ಆರೋಗ್ಯದ ಬಗ್ಗೆ ಯಾವುದೇ ಆತಂಕ ಬೇಡ ಎಂದು ವೈದ್ಯರು ತಿಳಿಸಿದ್ದಾರೆ.
ಆಸ್ಪತ್ರೆಗೆ ಭೀತಿ ನೀಡಿರುವ ನಟ ದುನಿಯಾ ವಿಜಯ್ ಕೂಡಾ ವೈದ್ಯರೊಂದಿಗೆ ಮಾತನಾಡಿದ್ದಾರೆ. ಬುಲೆಟ್ ಪ್ರಕಾಶ್ ಕುಟುಂಬ ಸದಸ್ಯರೊಂದಿಗೂ ಮಾತನಾಡಿದ್ದು, ನಟನ ಆರೋಗ್ಯದ ಬಗ್ಗೆ ಆತಂಕ ಬೇಡ ಎಂದು ವಿಜಯ್ ಹೇಳಿದ್ದಾರೆ.
ಎರಡು ವರ್ಷಗಳಿಂದ ಆರೋಗ್ಯ ಸಮಸ್ಯೆ?
ನಟ ಬುಲೆಟ್ ಪ್ರಕಾಶ್ ಅವರು ಎರಡು ವರ್ಷಗಳ ಹಿಂದೆ ತೂಕ ಇಳಿಸಿಕೊಳ್ಳಲು ಶಸ್ತ್ರ ಚಿಕಿತ್ಸೆ ಮಾಡಿಸಿಕೊಂಡಿದ್ದರು ಎನ್ನಲಾಗಿದೆ. ಶಸ್ತ್ರ ಚಿಕಿತ್ಸೆ ನಂತರ ಹಲವು ಆರೋಗ್ಯ ಸಮಸ್ಯೆಗಳನ್ನು ಎದುರಿಸುತ್ತಿದ್ದರು ಎಂದು ಹೇಳಲಾಗುತ್ತಿದೆ. ಶಸ್ತ್ರ ಚಿಕಿತ್ಸೆಯ ನಂತರ ಸಿನಿಮಾಗಳಲ್ಲಿ ನಟಿಸಲು ಅವರಿಂದ ಸಾಧ್ಯವಾಗುತ್ತಿಲ್ಲ ಎಂದು ಅವರ ಆಪ್ತರು ಹೇಳಿಕೊಂಡಿದ್ದಾರೆ. ತನ್ನ ಈ ಸ್ಥಿತಿಯಿಂದಾಗಿ ಈ ನಟ ಮಾನಸಿಕವಾಗಿ ಬಹಳ ನೊಂದಿದ್ದಾರೆಂದು ಅವರ ಆಪ್ತರು ಹೇಳಿಕೊಂಡಿದ್ದಾರೆ.