ಲಾಕ್ ಡೌನ್ ವೇಳೆ ರೈತರಿಗೆ ಅನ್ಯಾಯವಾದರೆ ಜೋಕೆ; ಅಧಿಕಾರಿಗಳಿಗೆ ಸರ್ಕಾರ ಎಚ್ಚರಿಕೆ

ಧಾರವಾಡ: ಕೊರೋನಾ ಹಾವಳಿ ಸಂದರ್ಭದಲ್ಲಿನ ಲಾಕ್ ಡೌನ್ ಪರಿಸ್ಥಿತಿಯ ದುರ್ಲಾಭ ಪಡೆಯಲು ಯತ್ನಿಸುತ್ತಿರುವ ಮಂದಿ ವಿರುದ್ಧ ಸರ್ಕಾರ ಗರಂ ಆಗಿದೆ. ರೈತರ ಬದುಕಲ್ಲಿ ಆಟವಾಡಲು ಯತ್ನಿಸುವವರ ವಿರುದ್ಧ ಕಠಿಣ ಕಾಂನೂನು ಕ್ರಮಕ್ಕೆ ಕೃಷಿ ಸಚಿವ ಬಿ.ಸಿ.ಪಾಟೀಲ್ ಆದೇಶಿಸಿದ್ದಾರೆ.

ರೈತಾಪಿ ಮಕ್ಕಳ ಸಮಸ್ಯೆ ಆಲಿಸುವ ಉದ್ದೇಶದಿಂದ ರಾಜ್ಯದ ವಿವಿಧ ಜಿಲ್ಲೆಗಳಿಗೆ ಪ್ರವಾಸ ಆರಂಭಿಸಿರುವ ಸಚಿವ ಬಿ.ಸಿ. ಪಾಟೀಲ್, ಸೋಮವಾರ ಧಾರವಾಡ ಜಿಲ್ಲೆಯ ರೈತರ ಸ್ಥಿತಿಗತಿ ಅವಲೋಕಿಸಿದರು. ಜಿಲ್ಲಾಧಿಕಾರಿ ಕಚೇರಿಯಲ್ಲಿ ಸಭೆ ನಡೆಸಿದ ಅವರು, ಮಧ್ಯವರ್ತಿಗಳ ಹಾವಳಿಯಿಂದ ರೈತರಿಗೆ ಯಾವುದೇ ರೀತಿಯ ಸಮಸ್ಯೆ ಆಗಬಾರದು. ಒಂದುವೇಳೆ ಯಾರಾದರೂ ಕೊರೊನಾ ಪರಿಸ್ಥಿತಿಯನ್ನು ದುರ್ಬಳಕೆ ಮಾಡಿಕೊಳ್ಳುವುದಾಗಲೀ ರೈತರಿಗೆ ಅನಾವಶ್ಯಕ ತೊಂದರೆ ಕೊಡುವುದಾಗಲೀ ಮಾಡಿದ್ದು ಕಂಡುಬಂದರೆ ತಕ್ಷಣ ಅಂತವರ ಬಗ್ಗೆ ಅಧಿಕಾರಿಗಳ ಗಮನಕ್ಕೆ ತರಬೇಕು ಎಂದು ಸೂಚಿಸಿದರು.

ಇದೇ ವೇಳೆ, ಕೃಷಿ ಸಚಿವರು ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ರೈತರ ಸಮಸ್ಯೆಗಳು , ಕೃಷಿ ಉತ್ಪನ್ನಗಳ ಮಾರಾಟ ಸರಕು ಸಾಗಾಣಿಕೆ, ಬೀಜ ಗೊಬ್ಬರ ಸರಬರಾಜು ಸೇರಿದಂತೆ ಸಮಗ್ರ ಕೃಷಿ ಚಟುವಟಿಕೆಗಳ ಸಂಬಂಧ ಕೃಷಿ, ಪೊಲೀಸ್, ಆರೋಗ್ಯ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳ ಸಭೆ ನಡೆಸಿದರು. ಈ ವೇಳೆ ಮಾತನಾಡಿದ ಅವರು, ಕೊರೊನಾದಿಂದಾಗಿ ರೈತರ ಬೆಳೆಗಳಿಗೆ ಬೇಡಿಕೆ ಕಡಿಮೆಯಾಗಿದ್ದರೂ ಸಹ ಮುಂದಿನ ದಿನಗಳಲ್ಲಿ ಫಸಲುಗಳಲ್ಲಿ ಉತ್ತಮ ಬೆಲೆ ಬರಲಿದೆ‌‌. ಯಾರೂ ಆತಂಕಕ್ಕೊಳಗಾಗುವ ಅವಶ್ಯಕತೆಯಿಲ್ಲ ಎಂದು ರೈತರಿಗೆ ಧೈರ್ಯ ತುಂಬಬೇಕಿದೆ ಎಂದರು. ರೈತರ ಪರಿಕರ ಬೆಳೆಗಳು, ತರಕಾರಿ ಹಣ್ಣುಹಂಪಲು ಮಾರಾಟ ಮಾಡಲು ಯಾವುದೇ ನಿರ್ಬಂಧವಿಲ್ಲ ಎಂದ ಅವರು, ತರಕಾರಿ ಮಾರುವ ಕೈಗಾಡಿಯವರೆಗೂ ಪಾಸ್ ನೀಡುವಂತೆ ಕೃಷಿ ಅಧಿಕಾರಿಗಳಿಗೆ ಸೂಚಿಸಿದರು.

Related posts