ಲಡಾಕ್ ಗಡಿಯಲ್ಲಿ ಕೆಂಪು ಸೇನೆ ಕಿರಿಕ್; ಭಾರತದ ವಿರುದ್ಧ ಚೀನಾ ಯುದ್ಧಸನ್ನದ್ಧ?

ದೆಹಲಿ; ಅಗೋಚರ ವೈರಾಣು ಸೃಷ್ಟಿಸಿ ಜಗತ್ತಿನಾದ್ಯಂತ ಕೋಲಾಹಲ ಸೃಷ್ಟಿಸಿರುವ ಕೆಂಪು ರಾಷ್ಟ್ರ ಚೀನಾ ಇದೀಗ ಭಾರತದ ವಿರುದ್ಧ ಸಮರ ಸಾರಿದಂತಿದೆ. ಭಾರತದ ಸಾಂಪ್ರದಾಯಿಕ ಎದುರಾಳಿ ದೇಶವಾಗಿರುವ ಚೀನಾ, ಲಡಾಖ್ ಗಡಿಭಾಗದಲ್ಲಿ ಆಗಾಗ್ಗೆ ತಕರಾರು ಎತ್ತುತ್ತಲೇ ಇದ್ದು ಇದೀಗ ಮತ್ತೆ ಗುದ್ದಾಟಕ್ಕಿಳಿದಿದೆ. ಕೆಲ ದಿನಗಳ ಹಿಂದೆ ಲಡಾಖ್’ನಲ್ಲಿ ಭಾರತೀಯ ಯೋಧರನ್ನು ಚೀನಾ ಪಡೆ ವಶಕ್ಕೆ ಪಡೆದಿದೆ ಎಂಬ ಸಂಗತಿ ಇದೀಗ ಬೆಳಕಿಗೆ ಬಂದಿದೆ.

ಲಡಾಖ್ ವಿಚಾರದಲ್ಲಿ ಚೀನಾ ದಶಕಗಳಿಂದಲೇ ಕಿರಿಕ್ ಮಾಡುತ್ತಲೇ ಇದ್ದು ಪಿಒಕೆ ಯಲ್ಲಿ ಪಾಕಿಸ್ತಾನ ಯಾವ ರೀತಿ ವರ್ತಿಸುತ್ತೋ ಅದೇ ರೀತಿಯಲ್ಲಿ ಮತ್ತೊಂದೆಡೆ ಚೀನಾ ಪಿತೂರಿ ಮಾಡುತ್ತಲಿದೆ. ಲಡಾಖ್’ನ ಪ್ಯಾಂಗ್ಯಾಂಗ್ ಸರೋವರದ ಬಳಿ ಬಹುದಿನಗಳಿಂದ ದಿನಗಳಿಂದ ಬೀಡು ಬಿಟ್ಟಿರುವ ಚೀನಾ ಸೇನೆ, ಭಾರತದ ಗಡಿಯೊಳಗೆ ನುಗ್ಗಿ ಪುಂಡಾಟ ಪ್ರದರ್ಶಿಸಿದೆ. ಇದಕ್ಕೆ ಎದಿರೇಟು ಕೊಡುವ ಮುನ್ನವೇ ಭಾರತದ ಹಲವು ಸೈನಿಕರನ್ನು ಚೀನಾ ಸೇನಾಪಡೆ ವಶಕ್ಕೆ ಪಡೆದಿದೆ. ಭಾರೀ ಸಂಖ್ಯೆಯಲ್ಲಿದ್ದ ಚೀನಾ ಯೋಧರು ಏಕಾಏಕಿ ಈ ರೀತಿ ವರ್ತಿಸುವುದನ್ನು ಗಮನಿಸಿದರೆ ಭಾರತದ ವಿರುದ್ಧ ಸಮರಕ್ಕೆ ಆ ರಾಷ್ಟ್ರ ಸಂಚು ರೂಪಿಸುತ್ತಿದೆಯೇ ಎಂಬ ಅನುಮಾನ ಕಾಡತೊಡಗಿದೆ.

ಭಾರತೀಯ ಯೋಧರನ್ನು ಹಲವು ತಾಸುಗಳ ಕಾಲ ವಶದಲ್ಲಿಟ್ಟುಕೊಂಡ ಚೀನಾಗೆ ತಕ್ಕ ಪಾಠ ಕಲಿಸುವ ಎಚ್ಚರಿಕೆಯನ್ನು ಭಾರತೀಯ ಸೇನೆ ರವಾನಿಸಿದೆ. ಉಭಯ ರಾಷ್ಟ್ರಗಳ ಸೇನಾಧಿಕಾರಿಗಳು ಮಾತುಕತೆ ನಡೆಸಿ ಪರಿಸ್ಥಿತಿ ಕೈಮೀರುವುದನ್ನು ತಡೆದರು. ಬಳಿಕ ಶಸ್ತ್ರಾಸ್ತ್ರಗಳನ್ನು ಕಸಿದುಕೊಂಡು ಸೈನಿಕರನ್ನು ಬಿಡುಗಡೆ ಮಾಡಿದ್ದಾರೆನ್ನಲಾಗಿದೆ.

ಗಾಲ್ವಾನ್ ಪ್ರದೇಶದಲ್ಲಿ ಚೀನಾ ಸೇನೆ ಸುಮಾರು 100 ಡೇರೆಗಳನ್ನು ಕಟ್ಟಿಕೊಂಡಿದೆ. ಜೊತೆಗೆ ಬಂಕರ್ ನಿರ್ಮಾಣಕ್ಕೂ ಪ್ರಯತ್ನ ನಡೆಸುತ್ತಿದೆ. ಅಷ್ಟೇ ಅಲ್ಲ ಗಾಲ್ವಾನ್ ಹಾಗೂ ಪಾಂಗೊಂಗ್ ತ್ಸೋ ಪ್ರದೇಶದಲ್ಲೂ ಚೀನಾ ಸೇನೆ ಭಾರೀ ಸಂಖ್ಯೆಯ ಯೋಧರೊಂದಿಗೆ ಜಮಾಯಿಸಿದೆ. ಈ ಹಿನ್ನೆಲೆಯಲ್ಲಿ ಗಡಿಭಾಗದಲ್ಲಿ ಭಾರತೀಯ ಸೇನೆಯನ್ನೂ ಸಜ್ಜುಗೊಳಿಸಲಾಗಿದೆ.

ಇದನ್ನೂ ಓದಿ.. ಕೊರೋನಾ ವೇಗ ಆತಂಕಕಾರಿ; ಇಟಲಿ, ಸ್ಪೇನ್ ದೇಶಗಳನ್ನು ಹಿಂದಿಕ್ಕಿತೇ ಭಾರತ? 

 

Related posts