ಕರೋನಾ ಕಂಪನ; ವೆನ್ಲಾಕ್ ವೈದ್ಯರ ಚಳಿ ಬಿಡಿಸಿದ ನಳಿನ್ ಕುಮಾರ್

ಮಂಗಳೂರು: ಕರೋನಾ ಸೋಂಕಿಗೊಳಗಾದವರ ಬಗ್ಗೆ ನಿರ್ಲಕ್ಷ್ಯ ವಹಿಸಲಾಗಿದೆ ಎಂಬ ಆರೋಪಕ್ಕೆ ಗುರಿಯಾಗಿರುವ ಮಂಗಳೂರಿನ ವೆನಲಾಕ್ ಆಸ್ಪತ್ರೆಗೆ ಸಂಸದ ನಳಿನ್ ಕುಮಾರ್ ಕಟೀಲ್ ಇಂದು ದಿಢೀರ್ ಭೇಟಿ ನೀಡಿದರು.

ಸಾಮಾಜಿಕ ಜಾಲತಾಣಗಳಲ್ಲೂ ವೆನ್ಲಾಕ್ ಆಸ್ಪತ್ರೆಯ ಅವ್ಯವಸ್ಥೆ ಬಗ್ಗೆ ಆಕ್ರೋಶದ ಪೋಸ್ಟ್’ಗಳು ಹರಿದಾಡುತ್ತಿತ್ತು. ನಿನ್ನೆಯವರೆಗೂ ಸಂಸತ್ ಅಧಿವೇಶನ ಹಿನ್ನೆಲೆಯಲ್ಲಿ ದೆಹಲಿಯಲ್ಲಿದ್ದ ನಳಿನ್ ಕುಮಾರ್, ಇಂದು ಮಂಗಳೂರಿಗೆ ಆಗಮಿಸುತ್ತಿದ್ದಂತೆಯೇ ಏಕಾಏಕಿ ವೆನ್ಲಾಕ್ ಆಸ್ಪತ್ರೆಗೆ ದೌಡಾಯಿಸಿದರು. ಸಾಮಾಜಿಕ ಜಾಲತಾಣಗಳಲ್ಲಿ ವ್ಯಕ್ತವಾಗುತ್ತಿರುವ ಆಕ್ರೋಶ ಹಿನ್ನೆಲೆಯಲ್ಲಿ ಪರಿಸ್ಥಿತಿಯ ಗಾಂಭೀರ್ಯತೆ ಅರಿತ ಸಂಸದ ನಳಿನ್ ಕುಮಾರ್ ಕಟೀಲ್, ಹಿರಿಯ ಅಧಿಕಾರಿಗಳ ಜೊತೆ ವೆನಲಾಕ್ ಆಸ್ಪತ್ರೆಗೆ ತೆರಳಿ ಅಧಿಕಾರಿಗಳಿಂದ ಮಾಹಿತಿ ಪಡೆದರು.

ಜಿಲ್ಲಾಧಿಕಾರಿ, ಜಿಲ್ಲಾ ಆರೋಗ್ಯಾಧಿಕಾರಿ, ಆಸ್ಪತ್ರೆಯ ಅಧೀಕ್ಷಕಿ ಸಹಿತ ವಿವಿಧ ಅಧಿಕಾರಿಗಳನ್ನು ಸ್ಥಳಕ್ಕೆ ಕರೆಸಿ ಸಮಾಲೋಚನೆ ನಡೆಸಿದರು. ಅವ್ಯಸ್ಥೆಗಳ ಬಗ್ಗೆ ಕೇಳಿಬಂದಿರುವ ಆಕ್ರೋಶವನ್ನು ಪ್ರಸ್ತಾಪಿಸಿ ಅಧಿಕಾರಿಗಳನ್ನು ಅವರು ತರಾಟೆಗೆ ತೆಗೆದುಕೊಂಡರು.

ಈ ವೇಳೆ ಸಂಸದರಿಗೆ ಸೂಕ್ತ ಮಾಹಿತಿ ನೀಡಿದ ಜಿಲ್ಲಾಧಿಕಾರಿ ಸಿಂಧೂ ಬಿ ರೂಪೇಶ್ ಅವರು ಕರೋನಾ ಚಿಕಿತ್ಸೆಗಾಗಿ ಪ್ರತ್ಯೇಕ ಬ್ಲಾಕ್ ವ್ಯವಸ್ಥೆ ಮಾಡಿರುವುದನ್ನು ಗಮನಕ್ಕೆ ತಂದರು.
ಈ ವೇಳೆ ಮಾತನಾಡಿದ ನಳಿನ್ ಕುಮಾರ್ ಕಟೀಲ್, ಜಿಲ್ಲಾಡಳಿತ, ರಾಜ್ಯ, ರಾಷ್ಟ್ರ ಸಂಪೂರ್ಣವಾಗಿ ಜನರ ಆರೋಗ್ಯ ಕಾಳಜಿಗೆ ಕಟಿಬದ್ಧವಾಗಿದೆ. ಹಾಗಾಗಿ ಊಹಾಪೋಹಗಳಿಗೆ ಜನ ಕಿವಿಗೊಡಬಾರದು ಎಂದು ಮನವಿ ಮಾಡಿದರು.

Related posts