ಬೆಂಗಳೂರು: ಅನೇಕ ಪ್ರಕರಣಗಳಲ್ಲಿ ಬೇಕಿದ್ದ ಅಂತಾರಾಷ್ಟ್ರೀಯ ಗ್ಯಾಂಗ್ ಸ್ಟಾರ್ ರವಿ ಪೂಜಾರಿಯನ್ನು ನ್ಯಾಯಾಲಯ ಪೊಲೀಸ್ ಕಸ್ಟಡಿಗೆ ನೀಡಿದೆ.
ಸೆನೆಗಲ್ ನಲ್ಲಿ ಬಂಧನಕ್ಕೊಳಗಾಗಿದ್ದ ರವಿ ಪೂಜಾರಿಯನ್ನು ಕರ್ನಾಟಕ ಪೊಲೀಸರು ಸೋಮವಾರ ಬೆಳಿಗ್ಗೆ ಬೆಂಗಳೂರಿಗೆ ಕರೆತಂದಿದ್ದರು. ಕಾನೂನು ಪ್ರಕ್ರಿಯೆಗಳನ್ನು ಮುಗಿಸಿ ಪೂಜಾರಿಯನ್ನು ಇಂದು ಬೆಂಗಳೂರಿನ ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು. ನೂರಾರು ಪ್ರಕರಣಗಳಲ್ಲಿ ಆರೋಪಿಯಾಗಿರುವ ರವಿ ಪೂಜಾರಿಯನ್ನು ವಿಚಾರಣೆಗೆ ಗುರಿಪಡಿಸುವ ಅಗತ್ಯವಿದೆ ಎಂದು ನ್ಯಾಯಾಲಯದ ಗಮನಕ್ಕೆ ತಂದ ಪೊಲೀಸರು ತಮ್ಮ ಕಸ್ಟಡಿಗೆ ಕೇಳಿದರು.
ಮನವಿಯನ್ನು ಪುರಸ್ಕರಿಸಿದ ಕೋರ್ಟ್, ರವಿ ಪೂಜಾರಿಯನ್ನು ಮಾರ್ಚ್ 7ರವರೆಗೆ ಪೊಲೀಸ್ ವಶಕ್ಕೆ ಒಪ್ಪಿಸಿದೆ. ಕೊಲೆ, ಅಪಹರಣ ಮತ್ತು ಹಪ್ತಾ ಸೇರಿದಂತೆ ದೇಶದ ವಿವಿಧೆಡೆ ರವಿ ಪೂಜಾರಿ ವಿರುದ್ಧ ಸುಮಾರು 200 ಪ್ರಕರಣಗಳು ದಾಖಲಾಗಿವೆ ಎಂದು ಹೇಳಲಾಗುತ್ತಿದೆ. ಕರ್ನಾಟಕದಲ್ಲೂ ೯೦ಕ್ಕೂ ಹೆಚ್ಚು ಪ್ರಕರಣಗಳಿದ್ದು ಇದೀಗ ತನಿಖೆ ಚುರುಕಾಗಿವೆ