ಅಯೋಧ್ಯೆಯಲ್ಲಿ ಭವ್ಯ ರಾಮಮಂದಿರ ನಿರ್ಮಾಣಕ್ಕೆ ಜುಲೈ 1ರಂದು ಭೂಮಿ ಪೂಜೆ

ದೆಹಲಿ: ಶ್ರೀರಾಮ ಜನ್ಮಭೂಮಿ ಅಯೋಧ್ಯೆಯಲ್ಲಿ ಭವ್ಯ ರಾಮಮಂದಿರ ನಿರ್ಮಾಣಕ್ಕೆ ಕ್ಷಣಗಣನೆ ಆರಂಭವಾಗಿದೆ. ಜುಲೈ 1ರಂದು ಭೂಮಿ ಪೂಜೆ ನೆರವೇರಿಸುವ ನಿರೀಕ್ಷೆ ಇದೆ. ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ದೇಗುಲ ನಿರ್ಮಾಣದ ಕೈಂಕರ್ಯಕ್ಕೆ ಮುನ್ನುಡಿ ಬರೆಯಲಿದ್ದಾರೆ.

ಬಹುಕಾಲದ ಕಾನೂನು ಸಮರದ ಬಳಿಕ ಅಯೋಧ್ಯೆಯ ಶ್ರೀರಾಮ ದೇಗುಲ ಹಿಂದೂಗಳ ವಶಕ್ಕೆ ಸಿಕ್ಕಿದೆ. ಆ ಮೂಲಕ ದಶಕಗಳಿಂದ ಉದ್ದೇಶಿತ ಭವ್ಯ ರಾಮಮಂದಿರ ನಿರ್ಮಾಣದ ಕನಸು ಗರಿಗೆದರಿತ್ತು. ಈಗಾಗಲೇ ಮಂದಿರ ನಿರ್ಮಾಣಕ್ಕೆ ಭೂಮಿ ಪೂಜೆ ನೆರವೇರಬೇಕಿತ್ತಾದರೂ ಕೊರೋನಾ ನಿಯಂತ್ರಣಕ್ಕಾಗಿ ಲಾಕ್’ಡೌನ್ ಜಾರಿಯಲ್ಲಿದ್ದುದರಿಂದಾಗಿ ದಿನಾಂಕ ಮುಂದೂಡಲಾಗಿತ್ತು.

ರಾಮಮಂದಿರ ನಿರ್ಮಾಣದ ಭೂಮಿ ಪೂಜೆ ಕಾರ್ಯ ಜುಲೈ 1ರಂದು ನೆರವೇರಿಸಲು ಸಿದ್ದತೆಗಳು ಸಾಗಿದೆ. ಶ್ರೀ ರಾಮ್ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಮುಂದಾಳುತ್ವದಲ್ಲಿ ಸುಮಾರು 70 ಎಕರೆ ಪ್ರದೇಶದಲ್ಲಿ ರಾಮಮಂದಿರ ನಿರ್ಮಾಣವಾಗಲಿದೆ.
ಈ ನಡುವೆ, ದೇವಾಲಯ ಸ್ಥಳದ ನೆಲ ಸಮಗೊಳಿಸುವಿಕೆ ಕಾರ್ಯ ಭರದಿಂದ ಸಾಗಿದೆ ಎಂದು ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ನ ಪ್ರಧಾನ ಕಾರ್ಯದರ್ಶಿ ಚಂಪತ್ ರೈ ತಿಳಿಸಿದ್ದಾರೆ.

Related posts