ವಿಚಿತ್ರ ಭಕ್ತಿ ಪರಾಕಾಷ್ಠೆ; ಮರ್ಮಾಂಗವನ್ನೇ ಕತ್ತರಿಸಿ ಶಿವನಿಗೆ ಸಮರ್ಪಿಸಿದ ಭೂಪ

ಮುಗ್ಧ ಭಕ್ತಿಯಿಂದ ಶಿವನಿಗೆ ತನ್ನ ಕಣ್ಣುಗಳನ್ನೇ ಅರ್ಪಿಸಿ ಶಿವಸಾನ್ನಿಧ್ಯವನ್ನು ಪಡೆದ ಶರಣನ ಕಥೆ ಎಲ್ಲರಿಗೂ ತಿಳಿದಿದೆ. ತಮಿಳಿನ ಪೆರಿಯಪುರಾಣದಲ್ಲೂ ಕನ್ನಡದಲ್ಲಿ ಹರಿಹರನ ರಗಳೆಗಳಲ್ಲೂ ಷಡಕ್ಷರಿಯ ವೃಷಭೇಂದ್ರ ವಿಜಯದಲ್ಲೂ ಈ ರೀತಿಯ ಕಥೆ ಬರುತ್ತದೆ. ಈ ಕಥೆಯನ್ನು ಆದರಿಸಿ ಸಿನಿಮಾವೂ ಸಿದ್ಧವಾಗಿದೆ. ಕಣ್ಣಪ್ಪ ಬೇಡರ ಸಮುದಾಯಕ್ಕೆ ಸೇರಿದ್ದನೆನ್ನಲಾಗಿದ್ದು, ಆ ಕಾರಣಕ್ಕಾಗಿ ಬೇಡರ ಕಣ್ಣಪ್ಪನೆಂದು ಪ್ರಸಿದ್ಧನಾಗಿದ್ದಾನೆ.

ಬೇಡರ ಕಣ್ಣಪನ ಕಥೆ ಒಂದು ರೀತಿಯಾದರೆ ಇಲ್ಲೊಬ್ಬ ಭೂಪ ಮತ್ತೊಂದು ವಿಚಿತ್ರ ರೀತಿ ಭಕ್ತಿ ಪರಾಕಾಷ್ಠೆ ಮೆರೆದು ಸುದ್ದಿಯ ಕೇಂದ್ರಬಿಂದುವಾಗಿದ್ದಾನೆ. ಮಧ್ಯಪ್ರದೇಶದ ಗ್ವಾಲಿಯರ್’ನಲ್ಲಿ 25 ವರ್ಷ ಪ್ರಾಯದ ಯುವಕನೊಬ್ಬ ತನ್ನ ಆರಾಧ್ಯ ದೈವ ಶಿವನಿಗೆ ತನ್ನ ಮರ್ಮಾಂಗವನ್ನೇ ತುಂಡರಿಸಿ ಸಮರ್ಪಿಸಿದ್ದಾನೆ. ಗ್ವಾಲಿಯರ್’ನಲ್ಲಿರುವ ಸೆಂಟ್ರಲ್ ಜೈಲಲ್ಲಿ ಈ ವಿಚಿತ್ರ ಘಟನೆ ನಡೆದಿದೆ. ಈ ಭಕ್ತಿ ಪರಾಕಾಷ್ಠೆ ಮೆರೆದವನು ಒಬ್ಬ ಕೈದಿ.

ವಿಷ್ಣು ಕುಮಾರ್ ಎಂಬ ಕೈದಿ ಕೊಲೆ ಪ್ರಕರಣವೊಂದರಲ್ಲಿ ಅಪರಾಧಿಯಾಗಿ ಜೀವಾವಧಿ ಶಿಕ್ಷೆ ಅನುಭವಿಸುತ್ತಿದ್ದಾನೆ. ಮಂಗಳವಾರ ಬೆಳಗ್ಗೆ ಈತ ಜೈಲು ಆವರಣದಲ್ಲಿರುವ ಶಿವನ ಗುಡಿಗೆ ತೆರಳಿ ಪೂಜೆ ಸಲ್ಲಿಸಿದ್ದಾನೆ. ಅಷ್ಟೇ ಅಲ್ಲ ತನ್ನ ಮರ್ಮಾಂಗವನ್ನೇ ಕತ್ತರಿಸಿ ದೇವರಿಗೆ ಸಮರ್ಪಿಸಿದ್ದಾನೆ. ಬಳಿಕ ನೋವು ತಾಳಲಾರದೆ ಕೂಗಾಡಿದ್ದಾನೆ.
ಈತನ ಚೀರಾಟ ಕೇಳಿ ಅಕ್ಕಪಕ್ಕದಲ್ಲಿದ್ದವರು ಧಾವಿಸಿ ನೋಡುವಷ್ಟರಲ್ಲಿ ಈತ ರಕ್ತದ ಮಡುವಿನಲ್ಲಿದ್ದ. ಕೂಡಲೇ ಆತನನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು.

ಈತನ ಈ ವಿಚಿತ್ರ ನಿರ್ಧಾರದ ಬಗ್ಗೆ ವಿಚಾರಣೆ ನಡೆಸಿದಾಗ ಕುತೂಹಲಕಾರಿ ಸಂಗತಿಯನ್ನು ಆತ ಹೇಳಿಕೊಂಡಿದ್ದಾನೆ. ರಾತ್ರಿ ಈತನಿಗೆ ಕನಸಿನಲ್ಲಿ ಶಿವ ಪ್ರತ್ಯಕ್ಷನಾಗಿದ್ದನಂತೆ. ಈಶ್ವರನ ಇಚ್ಛೆಯಂತೆ ಈತ ಮರ್ಮಾಂಗವನ್ನೇ ಕತ್ತರಿಸಿ ಸಮರ್ಪಿಸಿದನಂತೆ.

ಇದನ್ನೂ ಓದಿ.. ಕೊರೋನಾ ಸಂಕಟವೇ..? ಕವಿತೆಗಳ ಸಾಲುಗಳೇ ಇಲ್ಲಿ ಚೈತನ್ಯ.. ಸಂಗೀತದ ನಿನಾದವೇ ಔಷಧ

 

Related posts