ದ.ಕ. ಜಿಲ್ಲಾಧಿಕಾರಿ ವಾರ್ಗಾವಣೆಗೆ ಒತ್ತಡ? ಸಂಸದರ, ಶಾಸಕರ ಮೌನದ ಹಿಂದಿನ ಮರ್ಮವೇನು?

ಕೊರೋನಾ ಸೋಂಕಿನ ಮೂಲ ಹುಡುಕಲು ಮುಂದಾದ ಮಹಿಳಾ ಜಿಲ್ಲಾಧಿಕಾರಿ ವರ್ಗಾವಣೆಗೆ ಪ್ರಯತ್ನ ನಡೆದಿದೆಯೇ? ಒಂದು ವೇಳೆ ವರ್ಷಕ್ಕೂ ಮುನ್ನವೇ ಡಿಸಿ ಸಿಂಧು ಬಿ. ರೂಪೇಶ್ ಅವರನ್ನು ಎತ್ತಂಗಡಿ ಮಾಡಿದರೆ ಕರಾವಳಿಯ ಪ್ರಜ್ಞಾವಂತರು ಸುಮ್ಮನಿರುವರೇ?

ಮಂಗಳೂರು: ಕೊರೋನಾ ಸಂಕಟ ಕಾಲದಲ್ಲಿ ಅಧಿಕಾರಿಗಳಿಗೆ ರಾಜಕೀಯ ಒತ್ತಡ ಸವಾಲೆಂಬಂತಿದೆ. ಅದರಲ್ಲೂ ಮಹಿಳಾ ಅಧಿಕಾರಿಗಳೇ ರಾಜಕೀಯ ನಾಯಕರ ಟಾರ್ಗೆಟ್ ಆಗುತ್ತಿರುವುದೇಕೆ ಎಂಬ ಪ್ರಶ್ನೆ ಎಲ್ಲರಲ್ಲೂ ಮೂಡಿದೆ.

ಹಿಂದಿನ ಸರ್ಕಾರ ಹಾಸನ ಜಿಲ್ಲಾಧಿಕಾರಿಯಾಗಿದ್ದ ರೋಹಿಣಿ ಸಿಂಧೂರಿ ಅವರನ್ನು ವರ್ಗಾವಣೆ ಮಾಡಿ ಸಾರ್ವಜನಿಕರ ಆಕ್ರೋಶಕ್ಕೆ ಗುರಿಯಾಗಿತ್ತು. ಇದೀಗ ಈಗಿನ ಬಿಜೆಪಿ ಸರ್ಕಾರ ದಕ್ಷಿಣ ಕನ್ನಡದಲ್ಲಿರುವ ಮಹಿಳಾ ಜಿಲ್ಲಾಧಿಕಾರಿಯನ್ನು ಎತ್ತಂಗಡಿ ಮಾಡುವ ಪ್ರಯತ್ನದಲ್ಲಿವೆ ಎಂಬ ಮಾತುಗಳು ಹರಿದಾಡುತ್ತಿವೆ.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಒಂದೆಡೆ ಕೋವಿಡ್-19 ಮಹಾಮಾರಿ ವ್ಯಾಪಕ ವಾಗಿ ಹರಡುತ್ತಿದ್ದರೆ, ಇದೇ ವೇಳೆಗಾಗಲೇ ಜಿಲ್ಲಾಧಿಕಾರಿ ಸಿಂಧು ಬಿ. ರೂಪೇಶ್ ವರ್ಗಾವಣೆಗೆ ತೆರೆಮರೆಯಲ್ಲಿ ಪ್ರಯತ್ನಗಳು ನಡೆಯುತ್ತಿದೆ ಎನ್ನಲಾಗುತ್ತಿದ್ದು, ಈ ವಿದ್ಯಮಾನ ಕರಾವಳಿಯ ಪ್ರಜ್ಞಾವಂತ ನಾಗರಿಕರನ್ನು ಕೆರಳುವಂತೆ ಮಾಡಿದೆ.

ಸಿಂಧು ಬಿ. ರೂಪೇಶ್ ಅವರನ್ನು ವರ್ಗಾಯಿಸುವಂತೆ ಪ್ರಭಾವಿ ರಾಜಕಾರಣಿಗಳು ಸರ್ಕಾರದ ಮೇಲೆ ಒತ್ತಡ ಹೇರುತ್ತಿದ್ದಾರೆಂಬ ಮಾತುಗಳೂ ಕೇಳಿಬರುತ್ತಿವೆ. ಈ ಕುರಿತಂತೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಚರ್ಚೆಗಳೂ ಸಾಗಿವೆ.

ಮೌನದ ಹಿಂದಿನ ರಹಸ್ಯವೇನು?

ಜಿಲ್ಲೆಯಲ್ಲಿ ಸೋಂಕು ಮೂಲ ಪತ್ತೆ ವಿಳಂಬ ವಿಚಾರದಲ್ಲಿ ಸಾಕಷ್ಟು ಟೀಕೆಗಳು ವ್ಯಕ್ತವಾಗುತ್ತಿವೆ. ಈ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಸಿಂಧು ಬಿ. ರೂಪೇಶ್ ಅವರು ಕಟ್ಟು-ನಿಟ್ಟಿನ ಕ್ರಮಕ್ಕೆ ಮುಂದಾಗಿದ್ದಾರೆ ಎನ್ನಲಾಗಿದೆ. ವಿವಾದಕ್ಕೆ ಗುರಿಯಾಗಿರುವ ಆಸ್ಪತ್ರೆ ಬಗ್ಗೆ ತನಿಖೆಯೂ ಕೇಂದ್ರೀಕೃತವಾಗುವ ಸಾಧ್ಯತೆಗಳಿವೆ. ಈ ಸಂಧಿಕಾಲದಲ್ಲಿ ನಿಷ್ಟೂರ ಕ್ರಮಕ್ಕೆ ಮುಂದಾಗಿರುವ ಜಿಲ್ಲಾಧಿಕಾರಿಯನ್ನು ಎತ್ತಂಗಡಿ ಮಾಡುವ ಹುನ್ನಾರ ನಡೆದಿದೆ ಎಂಬ ಅಸಮಾಧಾನದ ಮಾತುಗಳೂ ಸಾರ್ವಜನಿಕ ವಲಯದಲ್ಲಿ ಹರಿದಾಡುತ್ತಿವೆ.

ಪ್ರಸ್ತುತ ದಕ್ಷಿಣಕನ್ನಡದ 7 ವಿಧಾನಸಭಾ ಕ್ಷೆತ್ರಗಳನ್ನು ಬಿಜೆಪಿ ಶಾಸಕರೇ ಪ್ರತಿನಿಧಿಸುತ್ತಿದ್ದಾರೆ. ಅದರಲ್ಲೂ ರಾಜ್ಯದ ಆಡಳಿತಾರೂಢ ಬಿಜೆಪಿ ಪಕ್ಷದ ರಾಜ್ಯಾಧ್ಯಕ್ಷರೇ ಈ ಜಿಲ್ಲೆಯ ಸಂಸದರು. ಹೀಗಿರುವಾಗ ದಕ್ಷ ಜಿಲ್ಲಾಧಿಕಾರಿ ವರ್ಗಾವಣೆ ಹುನ್ನಾರ ನಡೆಯುತ್ತಿದೆ ಎಂಬ ಸುದ್ದಿ ಕೇಳಿಬರುತ್ತಿದ್ದರೂ ಈ ಕುರಿತಂತೆ ಈ ಜನನಾಯಕರು ತುಟಿಕ್ ಪಿಟಿಕ್ ಅನ್ನುತ್ತಿಲ್ಲ. ಇವರೆಲ್ಲರೂ ಪ್ರಭಾವ ಬೀರಿದರೆ ಜಿಲ್ಲಾಧಿಕಾರಿಯನ್ನು ಉಳಿಸಿಕೊಳ್ಳಬಹುದು. ಆದರೆ ಈ ಶಾಸಕರ-ಸಂಸದರ ಮೌನದ ಹಿಂದಿನ ರಹಸ್ಯವೇನು ಎಂದು ಸಾರ್ವಜನಿಕರು ಪ್ರಶ್ನಿಸುತ್ತಿದ್ದಾರೆ. ಹಾಸನ ವಿಚಾರದಲ್ಲಿ ಸಿಡಿದೆದ್ದವರು ಮಂಗಳೂರು ಬೆಳವಣಿಗೆಯನ್ನು ಒಪ್ಪುತ್ತಾರಾ ಎಂಬ ಚರ್ಚೆಯೂ ಸಾಗಿದೆ.

ಮೊದಲ ಮಹಿಳಾ ಜಿಲಾಧಿಕಾರಿ

ಸಿಂಧು ಬಿ. ರೂಪೇಶ್‌ ಅವರು ದಕ್ಷಿಣ ಕನ್ನಡ ಜಿಲ್ಲೆಯ ಎರಡನೇ ಮಹಿಳಾ ಜಿಲ್ಲಾಧಿಕಾರಿ. ಈ ಹಿಂದೆ 1989-90ರಲ್ಲಿ ರಂಜನಿ ಶ್ರೀಕುಮಾರ್‌ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಪ್ರಥಮ ಮಹಿಳಾ ಜಿಲ್ಲಾಧಿಕಾರಿಯಾಗಿದ್ದರು. ಉಡುಪಿ ಪ್ರತ್ಯೇಕಗೊಂಡ ನಂತರ ದಕ್ಷಿಣ ಕನ್ನಡ ಜಿಲ್ಲಾಡಳಿತದ ಸಾರಥ್ಯ ವಹಿಸಿದ ಸಿಂಧು ಬಿ. ರೂಪೇಶ್‌ ಬಂದರು ನೆಲದ ಮೊದಲ ಜಿಲ್ಲಾಧಿಕಾರಿಯೆನಿಸಿದ್ದಾರೆ. ಇವರು ದಕ್ಷಿಣ ಕನ್ನಡ ಜಿಲ್ಲಾಧಿಕಾರಿಯಾಗಿ ನಿಯುಕ್ತಿಯಾಗಿ 7 ತಿಂಗಳಷ್ಟೇ ಕಳೆದಿರುವುದು. ಅದಾಗಲೇ ಅವರ ವರ್ಗಾವಣೆಗೆ ರಾಜಕೀಯ ಒತ್ತಡ ಸಾಗಿದೆ ಎನ್ನಲಾಗುತ್ತಿದೆ.

ಹಿಂದಿನ ಸರ್ಕಾರ ಹಾಸನ ಜಿಲ್ಲಾಧಿಕಾರಿಯಾಗಿದ್ದ ರೋಹಿಣಿ ಸಿಂಧೂರಿಯವರನ್ನು ಒಂದು ವರ್ಷದೊಳಗೆ ವರ್ಗಾಯಿಸಿದಾಗ ಆ ಆದೇಶದ ಬಗ್ಗೆ ಬಿಜೆಪಿ ನಾಯಕರು ಆಕ್ರೋಶ ವ್ಯಕ್ತ ಪಡಿಸಿದ್ದರು. ಇದೀಗ ಸಿಂಧು ಬಿ. ರೂಪೇಶ್‌ ವಿಚಾರದಲ್ಲಿ ಕಮಲಾ ನಾಯಕರ ನಿಲುವೇನು? ಒಂದು ವೇಳೆ ವರ್ಗಾವಣೆ ಮಾಡಿದರೂ ಪ್ರಜ್ಞಾವಂತ ಬಿಜೆಪಿ ಕಾರ್ಯಕರ್ತರ ಪ್ರತಿಭಟನೆಯನ್ನು ಯಾವ ರೀತಿ ಎದುರಿಸುತ್ತಾರೆ ಎಂಬ ಕುತೂಹಲವೂ ಎಲ್ಲರನ್ನೂ ಕಾಡಿದೆ.

Related posts