ಪಾದರಾಯನಪುರ ರಂಪಾಟ ಪ್ರಕರಣ: ಮುಲಾಜಿಲ್ಲದೆ ಕ್ರಮಕ್ಕೆ ಸಿಎಂ ಸೂಚನೆ

ಬೆಂಗಳೂರು: ಕೊರೋನಾ ಹಾಟ್’ಸ್ಪಾಟ್ ಬೆಂಗಳೂರಿನ ಪಾದರಾಯನಪುರ ಹಿಂಸಾಚಾರ ಬಗ್ಗೆ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ಘಟನೆಯನ್ನು ಗಂಭೀರವಾಗಿ ಪರಿಗಣಿಸಿರುವ ರಾಜ್ಯ ಸರ್ಕಾರ ತಪ್ಪಿತಸ್ಥರ ವಿರುದ್ಧ ಕಠಿಣ ಕಾನೂನು ಕ್ರಮಕ್ಕೆ ಮುಂದಾಗಿದೆ.

ಇಡೀ ರಾಜ್ಯವೇ ಬೆಚ್ಚಿ ಬೀಳುವಂತೆ ಮಾಡಿರುವ ಈ ಘಟನೆ ಕುರಿತಂತೆ ಪೊಲೀಸ್ ಅಧಿಕಾರಿಗಳಿಂದ ಮಾಹಿತಿ ಪಡೆದಿರುವ ಮುಖ್ಯಮಂತ್ರಿ ಯಡಿಯೂರಪ್ಪ ಹಿರಿಯ ಅಧಿಕಾರಿಗಳ ತುರ್ತು ಸಭೆ ನಡೆಸಿದರು. ಪಾದರಾಯನಪುರ ಹಿಂಸಾಚಾರ ಬಗ್ಗೆ ಸಿಡಿಮಿಡಿಗೊಂಡಿರುವ ಸಿಎಂ ಗಲಭೆಗೆ ಕಾರಣರಾದವರ ವಿರುದ್ಧ ಮುಲಾಜಿಲ್ಲದೆ ಕ್ರಮ ಕೈಗೊಳ್ಳಿ ಎಂದು ಪೊಲೀಸರಿಗೆ ನಿರ್ದೇಶನ ನೀಡಿದ್ದಾರೆ.

ಇದೆ ವೇಳೆ. ಗಲಭೆ ಕುರಿತಂತೆ ಪ್ರತಿಕ್ರಿಯಿಸಿರುವ ಗೃಹ ಸಚಿವ ಬಸವರಾಜ ಬೊಮ್ಮಾಯಿ, ಗಲಭೆಗೆ ಕಾರಣರಾದವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.

ಪಾದರಾಯನಪುರ ಘಟನೆಯನ್ನು ರಾಜ್ಯ ಬಿಜೆಪಿ ಯುವ ಮೋರ್ಚಾದ ಪ್ರಧಾನ ಕಾರ್ಯದರ್ಶಿ ಬಿ.ವೈ.ವಿಜಯೇಂದ್ರ ಖಂಡಿಸಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿರುವ ಅವರು, ಅಪಾಯ ಲೆಕ್ಕಿಸದೆ ತಮ್ಮ ಸುರಕ್ಷತೆಗಾಗಿ ಕೆಲಸ ಮಾಡುತ್ತಿರುವ ಸಿಬ್ಬಂದಿ, ಅಧಿಕಾರಿಗಳು, ಪೊಲೀಸರ ಮೇಲೆಯೇ ಹಲ್ಲೆ ನಡೆಸಿದ ಕಿಡಿಗೇಡಿಗಳ ವರ್ತನೆ ಖಂಡನೀಯ. ಇಂಥ ವಿಚ್ಛಿದ್ರಕಾರಿ ಮನಸ್ಥಿತಿಯವರು ನಾಗರಿಕ ಸಮಾಜದಲ್ಲಿ ಇರುವುದಕ್ಕೇ ನಾಲಾಯಕ್ ಎಂದು ಅವರೇ ಸಾಬೀತುಮಾಡಿದ್ದಾರೆ. ಇಂಥವರ ವಿರುದ್ಧ ಅತ್ಯಂತ ಕಠಿಣ ಕ್ರಮ ತೆಗೆದುಕೊಳ್ಳಬೇಕು ಎಂದು ಅಭಿಪ್ರಾಯಪಟ್ಟಿದ್ದಾರೆ.

ಇದನ್ನೂ ಓದಿ… ಪಾದರಾಯನಪುರ ಗಲಭೆ; ಆ ಲೇಡಿ ಡಾನ್ ಯಾರು ಗೊತ್ತಾ?

Related posts