ಯುವಜನರ ಸಬಲೀಕರಣಕ್ಕೆ ಮುನ್ನುಡಿ ಬರೆದ ಸೊಸೈಟಿ: ಕರಾವಳಿ ಮೂಲದ ಉದ್ಯಮಿಯ ಸಾಹಸಗಾಥೆ..

ಉಡುಪಿ: ಸಾಧಿಸುವ ಛಲವಿದ್ದರೆ ಎಂತಹಾ ಸಮುದ್ರದಲೆಗೂ ಎದುರಾಗಿ ಈಜಬಹುದಂತೆ. ಅದೇ ರೀತಿಯ ಛಲಗಾರನೊಬ್ಬ ಕಟ್ಟಿದ ಸೊಸೈಟಿಯೊಂದು ಇದೀಗ ಸಾವಿರಾರು ಜನರ ಸ್ವಾವಲಂಬಿ ಬದುಕಿಗೆ ಮುನ್ನುಡಿ ಬರೆದಿದೆ. ಇದು ಅಪರೂಪದಲ್ಲಿ ಅಪರೂಪದ ಸಾಧನೆಯಾದರೂ ಇಂದು ಸಾವಿರಾರು ಕುಟುಂಬಗಳು ಈ ಸೊಸೈಟಿಯ ಸಾರಥಿಯ ಸಹಾಯವನ್ನು ನೆನಯುತ್ತಿದೆ.

ಹೌದು, ಸುಮಾರು ಐದು ವರ್ಷಗಳ ಹಿಂದೆ ಖಾಸಗಿ ಹಾಗೂ ಸರ್ಕಾರಿ ಸ್ವಾಮ್ಯದ ಬ್ಯಾಂಕುಗಳು ಕರಾವಳಿಯ ಬಡ ಜನರಿಗೆ ಸಾಲ ನೀಡಲು ಹಿಂದೇಟು ಹಾಕುತ್ತಿದ್ದವು. ಕರಾವಳಿಯಲ್ಲಿ ಮೀನುಗಾರರು, ಬೀಡಿ ಕಾರ್ಮಿಕರು ಹಾಗೂ ಬಡ ಕೂಲಿಕಾರ್ಮಿಕರೇ ಹೆಚ್ಚಾಗಿದ್ದು, ಇವರಲ್ಲಿ ಆದಾಯವನ್ನು ನಿಗದಿಪಡಿಸಲು ಮಾನದಂಡವಿರಲಿಲ್ಲ. ಆದಾಯದ ಮೂಲವಿಲ್ಲದಿದ್ದರೆ ಬ್ಯಾಂಕ್ ಕೂಡಾ ಸಾಲ ನೀಡುವುದಿಲ್ಲ. ಈ ಬಡಪಾಯಿ ಮಂದಿ ಬ್ಯಾಂಕುಗಳತ್ತ ಮುಖಮಾಡಿದರೆ ಹಣದ ನೆರವು ಸಿಗುತ್ತಿರಲಿಲ್ಲ. ಬದಲಾಗಿ ಅವಮಾನ ಎದುರಾಗುತ್ತಿತ್ತು.

ಈ ಬಡಪಾಯಿ ಮಂದಿಯ ಪರಿಸ್ಥಿತಿಯನ್ನು ಅರಿತ ಉದ್ಯಮಿ ಗೋವಿಂದ ಬಾಬು ಪೂಜಾರಿಯವರು ತಾವೇ ಒಂದು ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಯನ್ನು ಸ್ಥಾಪಿಸಿದರು. ಉಡುಪಿ ಜಿಲ್ಲೆ ಉಪ್ಪುಂದದಲ್ಲಿ ಅವರು ಆರಂಭಿಸಿದ ‘ಶ್ರೀ ವರಲಕ್ಷ್ಮೀ ಸೌಹಾರ್ದ ಕ್ರೆಡಿಟ್‌ ಕೋ-ಆಪರೇಟಿವ್ ಸೊಸೈಟಿ’ ಹಲವಾರು ಯಶೋಗಾಥೆಯನ್ನು ಬರೆದು ಇದೀಗ ಬಹು ಶಾಖೆಗಳನ್ನು ಹೊಂದಿದ ಹಣಕಾಸು ಸಂಸ್ಥೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

ಇದೀಗ ಕರಾವಳಿಯ ಬೈಂದೂರಿನ ನೂತನ ಶಾಖೆ ಕೂಡಾ ಕಾರ್ಯಾರಂಭ ಮಾಡಿದ್ದು, ಈ ಶಾಖೆಯನ್ನು ಬಿಜೂರಿನ ಬಾಬು ಪೂಜಾರಿ ದಂಪತಿ ಉದ್ಘಾಟಿಸಿದರು. ಖ್ಯಾತ ಜ್ಯೋತಿಷಿ ರಘುನಾಥ್ ಜೋಯಿಸ್, ಜಿ.ಪಂ.ಮಾಜಿ ಅಧ್ಯಕ್ಷ ಎಸ್.ರಾಜು ಪೂಜಾರಿ, ಸೊಸೈಟಿ ಅಧ್ಯಕ್ಷ ಗೋವಿಂದ ಬಾಬು ಪೂಜಾರಿ, ಉಪಾಧ್ಯಕ್ಷ ಸುಧಾಕರ ಪೂಜಾರಿ ಹಾಗೂ ಅನೇಕ ಗಣ್ಯರು ಉಪಸ್ಥಿತರಿದ್ದರು.

ಐದು ವರ್ಷಗಳ ಮಹಾ ಯಜ್ಞ..!!

ಸುಮಾರು ಐದು ವರ್ಷಗಳ ಹಿಂದೆ ವನಿತೆಯರ ಸಬಲೀಕರಣ ಉದ್ದೇಶದಿಂದ ಶ್ರೀ ವರಲಕ್ಷ್ಮೀ ಸೌಹಾರ್ದ ಕ್ರೆಡಿಟ್‌ ಕೋ-ಆಪರೇಟಿವ್ ಸೊಸೈಟಿ ಅಸ್ತಿತ್ವಕ್ಕೆ ಬಂತು. ಮೀನುಗಾರ ಮಹಿಳೆಯರು, ಬೀಡಿ ಕಾರ್ಮಿಕರು ಸೇರಿದಂತೆ ಬಡವರ್ಗದವರ ಪಾಲಿಗೆ ಆಶಾಕಿರಣವಾದ ಈ ಸೊಸೈಟಿಯ ಸೇವೆ ಮಹಿಳೆಯರಿಗಷ್ಟೇ ಅಲ್ಲ, ಎಲ್ಲಾ ವರ್ಗದವರಿಗೆ ಸಿಗಲಿ ಎಂಬ ಸರಣಿ ಒತ್ತಾಯ ಕೇಳಿಬಂದಾಗ ಈ ಸೊಸೈಟಿ ತನ್ನ ಸೇವೆಯನ್ನು ವಿವಿಧ ವಲಯಗಳಿಗೆ ವಿಸ್ತರಿಸಿತು. ಆರಂಭದಲ್ಲಿ ಸುಮಾರು ಮುನ್ನೂರು ಮಂದಿ ಈ ಸೊಸೈಟಿಯಲ್ಲಿ ಷೇರುದಾರರಾಗಿ ಸಾಲ ಪಡೆದು ತಮ್ಮ ಉದ್ಯಮ ಸ್ವರೂಪವನ್ನೇ ಬದಲಾಯಿಸಿಕೊಂಡರು.

‘ಶ್ರೀ ವರಲಕ್ಷ್ಮೀ ಸೌಹಾರ್ದ ಕ್ರೆಡಿಟ್‌ ಕೋ-ಆಪರೇಟಿವ್ ಸೊಸೈಟಿ’ಯ ಈ ಯಶೋಗಾಥೆಯನ್ನರಿತ  ಕರಾವಳಿಯ ಬಹಳಷ್ಟು ಜನ ಈ ಸಂಸ್ಥೆಯತ್ತ ಚಿತ್ತ ಹರಿಸಿದರು. ರೈತರು, ಹಾಗೂ ಇತರೆ ಶ್ರಮಿಕ ವರ್ಗದವರಿಗೆ ಸಾಲ ನೀಡಿದ ಈ ಸೊಸೈಟಿ ತನ್ನ ಗ್ರಾಹಕರಿಗೆ ಆಧಾರವಾಗಿ ನಿಂತಿತು. ಒಂದು ವೇಳೆ ಸಾಲ ಪಡೆದವರು ಮರುಪಾವತಿಸಲು ಅಸಹಾಯಕರಾದರೆ ಸೊಸೈಟಿಯ ಪ್ರಮುಖರೇ ಅವರಿಗೆ ಉತ್ತೇಜನಕಾರಿ ಸೂತ್ರ ಹೆಣೆದು ಸಾಲದ ಸುಳಿಯಿಂದ ಪಾರು ಮಾಡುತ್ತಿದ್ದರು. ಸದಸ್ಯರ ನಡುವಿನ ಸ್ವಸಹಾಯದ ಸೂತ್ರವೇ ಈ ಸೊಸೈಟಿಯ ಗಟ್ಟಿತನ ಎನ್ನುತ್ತಾರೆ ಅಧ್ಯಕ್ಷ ಗೋವಿಂದ ಬಾಬು ಪೂಜಾರಿ.

ಯಾರು ಈ ಗೋವಿಂದ ಪೂಜಾರಿ?

ಗೋವಿಂದ ಬಾಬು ಪೂಜಾರಿ ಮೂಲತಃ ಕುಂದಾಪುರದವರು. ಬಡ ಕುಟುಂಬದಲ್ಲಿ ಹುಟ್ಟಿದ ಇವರು ಬಾಲ್ಯದಲ್ಲೇ ಮುಂಬೈಗೆ ತೆರಲಿ‌ ಹೊಟೇಲ್ ಉದ್ಯಮಿಗಳ ಗರಡಿಯಲ್ಲಿ ಪಳಗಿ ತನ್ನದೇ ಸಂಸ್ಥೆ ಕಟ್ಟಿದವರು. ಮುಂಬೈ, ಥಾಣೆ, ಪುಣೆ, ಹೈದರಾಬಾದ್ ಸಹಿತ ದೇಶದ ವಿವಿಧೆಡೆ ತಮ್ಮ ಕ್ಯಾಟರಿಂಗ್ ಉದ್ಯಮ ವಿಸ್ತರಿಸಿದ ಇವರು ಬೆಂಗಳೂರಿನಲ್ಲೂ ChefTalk and Hospitality Services Pvt Ltd ಕಂಪೆನಿ ಸ್ಥಾಪಿಸಿ ಜನರ ಹಸಿವು ನೀಗಿಸುವ ಕಾಯಕಕ್ಕೆ ಮುನ್ನುಡಿ ಬರೆದವರು. ಬೆಂಗಳೂರು ಹಾಗೂ ಮುಂಬೈ ಮಹಾನಗರಗಳ ಬಹುತೇಕ ಹಾಸ್ಟೆಲ್’ಗಳಿಗೆ ಪೊಲೀಸ್ ಠಾಣೆಗಳಿಗೆ ನಿತ್ಯ ಉಚಿತ ಊಟ ಒದಗಿಸುತ್ತಿರುವ ಈ ಸಂಸ್ಥೆ ಬೆಂಗಳೂರಿನ ಇಂದಿರಾ ಕ್ಯಾಂಟೀನ್ ಮೂಲಕ ಲಕ್ಷಾಂತರ ಜನರಿಗೆ ಊಟ ಪೂರೈಸುತ್ತಿದೆ. ಈ ಕಾರ್ಯದ ಜೊತೆಯಲ್ಲೇ ‘ವರಲಕ್ಷ್ಮಿ ಚಾರಿಟೇಬಲ್ ಟ್ರಸ್ಟ್’ ಸ್ಥಾಪಿಸಿ ಸಮಾಜಿಕ ಕೈಂಕರ್ಯದಲ್ಲೂ ತೊಡಗಿದ್ದಾರೆ.

ಇದನ್ನೂ ಓದಿ.. ಬರಡು ಭೂಮಿಗೆ ಜೀವಜಲ ಹರಿಸಿದ “ಭಗೀರಥ’ ಇಂದಿರಾ ಕ್ಯಾಂಟೀನ್ ಕ್ಯಾಪ್ಟನ್ 

 

Related posts